ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಪ್ರವಚನಕ್ಕೆ ಫೇಸ್‌ಬುಕ್ ಮೊರೆ ಹೋದ ಮಠಾಧೀಶರು

ಹಬ್ಬದ ಸಂಭ್ರಮದ ಮೇಲೆ ಕೊರೊನಾ ಕರಾಳ ಛಾಯೆ
Last Updated 21 ಜುಲೈ 2020, 19:30 IST
ಅಕ್ಷರ ಗಾತ್ರ

ಬೀದರ್: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ತೀರ್ಥಕ್ಷೇತ್ರ, ಮಠ, ಮಂದಿರಗಳಲ್ಲಿ ವಿಶೇಷ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗುತ್ತಿದ್ದವು. ಆದರೆ, ಕೋವಿಡ್ ಸೋಂಕಿನ ಭಯದಿಂದ ಈ ಬಾರಿ ಅನೇಕ ದೇಗುಲಗಳ ಬಾಗಿಲುಗಳು ತೆರೆದುಕೊಂಡಿಲ್ಲ. ಜನ ತಮ್ಮ ತಮ್ಮ ಮನೆಗಳಲ್ಲೇ ದೇವರಿಗೆ ಪೂಜೆ ಮಾಡಲು ಆರಂಭಿಸಿದ್ದಾರೆ.

ಭಕ್ತರು ಮಠ, ಮಂದಿರಗಳಿಗೆ ಬಾರದ ಕಾರಣ ಮಠಾಧೀಶರು ಆನ್‌ಲೈನ್‌ ಮೂಲಕ ಪ್ರವಚನ ನೀಡಲು ಶುರು ಮಾಡಿದ್ದಾರೆ. ಫೇಸ್‌ಬುಕ್‌, ವಾಟ್ಸ್ಆ್ಯಪ್, ಮೊಬೈಲ್ ಬಳಸಿ ಹಾಳಾಗಬೇಡಿ ಎಂದು ಹೇಳುತ್ತಿದ್ದ ಮಠಾಧೀಶರೇ ಈಗ ಫೇಸ್‌ಬುಕ್‌ ಮೊರೆ ಹೋಗಿದ್ದಾರೆ.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮರಾಠಿಯಲ್ಲಿ, ಭಾಲ್ಕಿಯ ಮಹಾಲಿಂಗ ಸ್ವಾಮೀಜಿ ತೆಲುಗುನಲ್ಲಿ ಹಾಗೂ ಗುರುಬಸವ ಪಟ್ಟದ್ದೇವರು ಕನ್ನಡದಲ್ಲಿ ಫೇಸ್‌ಬುಕ್ ಲೈವ್ ಪ್ರವಚನ ಆರಂಭಿಸಿದ್ದು, ಆಗಸ್ಟ್ 22ರ ವರೆಗೆ ಪ್ರವಚನ ನೀಡಲಿದ್ದಾರೆ.
ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಅವರೂ ಜುಲೈ 25 ರಿಂದ ಶ್ರಾವಣ ಅಂತ್ಯದವರೆಗೆ ಪ್ರತಿ ದಿನ ಸಂಜೆ 5 ಗಂಟೆಗೆ ಫೇಸ್‌ಬುಕ್‌ನಲ್ಲಿ ಲೈವ್ ಪ್ರವಚನ ಕೊಡಲು ನಿರ್ಧರಿಸಿದ್ದಾರೆ. ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ನೌಬಾದ್ ಸಮೀಪದ ಜ್ಞಾನ ಶಿವಯೋಗಾಶ್ರಮದಲ್ಲಿ ತಪೋ ಅನುಷ್ಠಾನದಲ್ಲಿ ತೊಡಗಿದ್ದಾರೆ.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಜನರ ಹಿತದೃಷ್ಟಿಯಿಂದ ನಗರದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಅವರು ಬಹಿರಂಗ ಪ್ರವಚನ ಆಯೋಜಿಸಿಲ್ಲ. ಆದರೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಕ್ತರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.


ನಗರದ ಪಾಪನಾಶ ಮಂದಿರ, ತಾಲ್ಲೂಕಿನ ಹೊನ್ನಿಕೇರಿಯ ಸಿದ್ಧೇಶ್ವರ ದೇಗುಲ, ಔರಾದ್‌ನ ಅಮರೇಶ್ವರ ದೇವಸ್ಥಾನ ಹಾಗೂ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ಮಂದಿರದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಮನೆ ಮನೆಗೆ ಸ್ವಾಮೀಜಿಯವರನ್ನು ಕರೆಯಿಸಿ ಅನ್ನ ಸಂತರ್ಪಣೆ ಮಾಡುವ ಸಂಪ್ರದಾಯಕ್ಕೆ ಕಡಿವಾಣ ಬಿದ್ದಿದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ನಾಗರ ಪಂಚಮಿತಿಗೆ ಊರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಜನ ವಾಟ್ಸ್ಆ್ಯಪ್‌ಗಳ ಮೂಲಕ ಶ್ರಾವಣ ಶುಭಾರಂಭದ ಸಂದೇಶ ಕಳಿಸಿ ಶುಭ ಹಾರೈಸುತ್ತಿದ್ದಾರೆ.

‘ಧರ್ಮದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಶ್ರಾವಣ ಮಾಸದಲ್ಲಿ ಸಾಮೂಹಿಕ ಪೂಜೆ, ಪುನಸ್ಕಾರಕ್ಕೆ ಅವಕಾಶ ಇಲ್ಲ. ಅರ್ಚಕರೇ ಪೂಜೆ ಮಾಡಲಿದ್ದಾರೆ. ಕೋವಿಡ್ ಸೋಂಕು ಹರಡುವಿಕೆ ತಡೆಯುವ ದಿಸೆಯಲ್ಲಿ ಭಕ್ತರು
ತಮ್ಮ ಮನೆಗಳಲ್ಲೇ ಪೂಜಾ ಕಾರ್ಯಗಳನ್ನು ಮಾಡಿಕೊಳ್ಳಬೇಕು’ ಎಂದು ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT