ಶುಕ್ರವಾರ, ಜೂನ್ 18, 2021
28 °C
ವಲಸೆ ಹೋಗಿದ್ದವರು ವಾಪಸ್‌; ಆತಂಕದಲ್ಲಿ ಗ್ರಾಮೀಣ ಭಾಗದ ಜನ

ಹಳ್ಳಿಗಳಿಗೂ ವ್ಯಾಪಿಸಿದ ಕೊರೊನಾ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ನಗರ, ಪಟ್ಟಣಗಳ ನಿವಾಸಿಗಳನ್ನು ಕಾಡುತ್ತಿದ್ದ ಕೊರೊನಾ ಸೋಂಕು ಇದೀಗ ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಭಯಭೀತರಾಗಿ ಆತಂಕದಲ್ಲಿ ಜೀವನ ನಡೆಸುವಂತಾಗಿದೆ.

ಕಳೆದ ಕೆಲವು ದಿನಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಜನರಲ್ಲಿ ಕೊರೊನಾ ಸೋಂಕು ಹರಡಿರುವುದು ಕಂಡುಬಂದಿದೆ. ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದಲ್ಲಿ 6 ಜನ, ಖಟಕಚಿಂಚೋಳಿಯಲ್ಲಿ 5, ಕಟ್ಟಿ ತುಗಾಂವ್‌ದಲ್ಲಿ 4, ಚಳಕಾಪುರದಲ್ಲಿ 2, ಚಿಟ್ಟಾ 1, ಮಾಸಿಮಾಡ 1 ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇದರಿಂದ ಸಮುದಾಯ ಮಟ್ಟದಲ್ಲಿ ಕೊರೊನಾ ಸೋಂಕು ಹರಡಿರುವುದು ಸ್ಪಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

‘ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಆದರೆ, ಗ್ರಾಮೀಣ ಭಾಗದ ಜನರು ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿದ್ದಾರೆ’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಹುಡುಕಿಕೊಂಡು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಗೆ ಹಾಗೂ ರಾಜ್ಯದ ಬೇರೆ ಬೇರೆ ನಗರಗಳಿಗೆ ವಲಸೆ ಹೋಗಿದ್ದರು. ಕರ್ಫ್ಯೂ ಘೋಷಿಸಿದ ಕಾರಣ ಈಗ ತಮ್ಮ ಸ್ವ ಗ್ರಾಮಗಳಿಗೆ ಬರುತ್ತಿದ್ದಾರೆ.

‘ಕಳೆದ ವರ್ಷ ಬೇರೆ ರಾಜ್ಯ, ಜಿಲ್ಲೆ, ನಗರಗಳಿಂದ ಬಂದವರಿಗೆ 14 ದಿನಗಳ ವರಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತಿತ್ತು. ಜೊತೆಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿದ್ದರಿಂದ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವಾಗಿತ್ತು’ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದಪ್ಪ ಜಾಡರ್ ತಿಳಿಸುತ್ತಾರೆ.

‘ಗ್ರಾಮ ಪಂಚಾಯಿತಿಯಿಂದ ಜಾಗೃತಿ ಮೂಡಿಸಬೇಕು. ಸ್ಯಾನಿಟೈಸರ್ ಸಿಂಪಡಿಸಬೇಕು. ಇದರಿಂದ ಸೋಂಕು ಹರಡುವುದನ್ನು ನಿಯಂತ್ರಿಸಬಹುದು’ ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತ ಸುಭಾಷ ಕೆನಾಡೆ.

‘ಕೊರೊನಾ ಸೋಂಕು ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಂಡರೆ ಅಪಾಯ ತಪ್ಪಿದಲ್ಲ. ‌ಆದ್ದರಿಂದ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ಮನೆಯ ಹೊರಗಡೆ ಓಡಾಡಲು ಬಿಡಬಾರದು' ಎಂದು ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ ಮನವಿ ಮಾಡಿಕೊಂಡರು.

‘ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಪಡೆಯಲು ಎಲ್ಲರೂ ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದ ಜನರಲ್ಲಿ ಲಸಿಕೆ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು’ ಎಂದು ನಾವದಗಿ ಗ್ರಾಮದ ನಾಗನಾಥ ಬಿರಾದಾರ ಒತ್ತಾಯಿಸುತ್ತಾರೆ.

‘ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಗೆ ವೈದ್ಯಾಧಿಕಾರಿ, ಕಿರಿಯ ಆರೋಗ್ಯ ಸಹಾಯಕ, ಸಹಾಯಕಿಯರು ಕಡ್ಡಾಯವಾಗಿ ಇರಬೇಕು. ಕೆಲವು ಗ್ರಾಮಗಳಲ್ಲಿ ಲಸಿಕೆ ಹಾಕಿದ ನಂತರ ನಾಲ್ಕೈದು ದಿನಗಳವರೆಗೆ ಗ್ರಾಮದ ಕಡೆ ಮುಖ ಮಾಡಿ ನೋಡುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಸಂಗಮೇಶ ಜಾಂತೆ ಆಗ್ರಹಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.