ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಆದೇಶ
Last Updated 5 ಮೇ 2020, 10:32 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪ್ರತಿದಿನ ಒಂದು ‘ನಿರ್ದಿಷ್ಟ ಸಮಯ’ ನಿಗದಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬಗ್ಗೆ ಸುಧೀರ್ಘ ಚರ್ಚಿಸಲಾಯಿತು.

ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ. ಕಿರಾಣಿ ಪಡೆಯಲು ಒಮ್ಮೆ, ತರಕಾರಿ ಒಯ್ಯಲು ಇನ್ನೊಮ್ಮೆ ಎಂದು ಜನರು ಮತ್ತೆ ಮತ್ತೆ ರಸ್ತೆಗೆ ಬರುವಂತಾಗಬಾರದು. ಜನರಿಗೂ ಮತ್ತು ವ್ಯಾಪಾರಸ್ಥರಿಗೂ ಅನುಕೂಲವಾಗುವ ಹಾಗೆ ಒಂದು ಸಮಯವನ್ನು ನೀಡೋಣ. ಜಿಲ್ಲೆಯಲ್ಲಿನ ಸ್ಥಿತಿಗತಿ ನೋಡಿ ಮತ್ತು ಸರ್ಕಾರದ ನಿರ್ದೇಶದನುಸಾರ ಸಮಯವೊಂದನ್ನು ನಿರ್ದಿಷ್ಟಪಡಿಸೋಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಲೆ, ಮುಖ ಹಿಡಿದು ಬಹಳ ಹತ್ತಿರದಲ್ಲಿ ಕೆಲಸವಾಗುವ ಸಲೂನ್ ಅಂಗಡಿಗಳನ್ನು ಮತ್ತು ಬಹಳಷ್ಟು ಜನರು ಒಟ್ಟಿಗೆ ಬರುವುದು ಬಟ್ಟೆ ಮುಟ್ಟುವುದು ಹೋಗುವುದು ಮಾಡುವ ಬಟ್ಟೆ ಅಂಗಡಿಗಳನ್ನು ಇನ್ನಷ್ಟು ದಿನಗಳ ಕಾಲ ಮುಚ್ಚುವುದೇ ಸೂಕ್ತ ಎನ್ನುವ ಬಗ್ಗೆ ಚರ್ಚೆ ನಡೆಯಿತು.

ಸಡಿಲಿಕೆ ಇಲ್ಲ: ಬೀದರ್ ಓಲ್ಡ್ ಸಿಟಿ ಸೇರಿದಂತೆ ಕಂಟೋನ್ಮೆಂಟ್‌ ಏರಿಯಾದಲ್ಲಿ ಲಾಕ್‌ಡೌನ್ ಸಡಿಲಿಕೆಗೆ ಅವಕಾಶವಿಲ್ಲ. ಹಿಂದಿನ ನಿಯಮಗಳೇ ಅಲ್ಲಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್ ಅನ್ನು ಅಲ್ಲಿ ಕಡ್ಡಾಯಗೊಳಿಸಬೇಕು. ಸರ್ಕಾರಿ ನೌಕರರು ಮತ್ತು ಸಿಬ್ಬಂದಿ ಕೂಡ ಕಡ್ಡಾಯ ಆರೋಗ್ಯ ಸೇತು ಬಳಸುವಂತಾಗಬೇಕು ಎಂದು ಮಹಾದೇವ
ಸೂಚಿಸಿದರು.

ಮೆಡಿಕಲ್ ಬಿಟ್ಟು ಯಾವುದೇ ಅಂಗಡಿಗಳು ಬಾಗಿಲು ತೆರೆಯದಂತೆ ನೋಡಿಕೊಳ್ಳಬೇಕು. ಹೋಟೆಲ್‌ ತೆರೆಯಲು ಅವಕಾಶ ಇಲ್ಲ. ಆದರೆ ಗ್ರಾಹಕರಿಗೆ ಪಾರ್ಸಲ್‌ಗಳನ್ನು ಕೊಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಕರಪತ್ರ ಹಂಚಬೇಕು. ಯಾವ ಅಂಗಡಿಗಳಲ್ಲಿ ಏನು ನಿಯಮ ಪಾಲನೆ ಮಾಡಬೇಕು. ಜನರು ಕೂಡ ಇನ್ನೂ ಯಾವ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವ ಮಾಹಿತಿ ಅದರಲ್ಲಿ ಇರಬೇಕು ಎಂದು ಹೇಳಿದರು.

ವಾಕ್‌ಚಾತುರ್ಯ ಹೊಂದಿದ ಶಿಕ್ಷಕರಿಂದ ವಾಹನಗಳ ಮೂಲಕ ಪ್ರಚಾರ ಮಾಡಿಸಬೇಕು. ಮಾಸ್ಕ್‌ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಬೇಕು. ದಂಡ ವಿಧಿಸಿದ ನಂತರವೂ ಮಾಸ್ಕ್‌ ಬಳಸದಿದ್ದರೆ ನೇರವಾಗಿ ಜೈಲಿಗೆ ಕಳಿಸಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಹಿರಿಯರು, ಗರ್ಭಿಣಿಯರು ಮತ್ತು ಮಕ್ಕಳು ಮನೆಯಿಂದ ಹೊರಬರಬಾರದು. ಮತ್ತು ಕೆಮ್ಮು, ಜ್ವರ, ನೆಗಡಿಯಿದ್ದರೆ ಮುಚ್ಚಿಡದೆ ತಕ್ಷಣ ತೋರಿಸಿಕೊಳ್ಳಬೇಕು ಎಂದು ಪ್ರಚಾರದ ವೇಳೆಯಲ್ಲಿ ತಿಳಿಸುವಂತಾಗಬೇಕು ಎಂದು ತಿಳಿಸಿದರು.

ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ವಿಳಂಬವಾದರೆ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ. ಈ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT