ಬುಧವಾರ, ಮೇ 27, 2020
27 °C

ಭಾಲ್ಕಿ: ಕೊರೊನಾ ಹೊಡೆತ, ಕಲ್ಲಂಗಡಿ ಬೆಳೆದ ರೈತರಿಗೆ ನಷ್ಟ

ಬಸವರಾಜ್ ಎಸ್. ಪ್ರಭಾ Updated:

ಅಕ್ಷರ ಗಾತ್ರ : | |

ಭಾಲ್ಕಿ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಉಂಟಾಗಿ ಕೈ ತುಂಬಾ ಹಣ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಕೊರೊನಾ ವೈರಸ್‌ನಿಂದಾಗಿ ನಷ್ಟ ಅನುಭವಿಸುತ್ತಿದ್ಧಾರೆ.

ತಾಲ್ಲೂಕಿನ ಖಟಕ ಚಿಂಚೋಳಿ, ಹಲಬರ್ಗಾ, ಭಾತಂಬ್ರಾ, ಲಖನಗಾಂವ ಹೋಬಳಿಯ ಅನೇಕ ಗ್ರಾಮಗಳ ರೈತರು ಕಲ್ಲಂಗಡಿ ಬೆಳೆದು ಕಷ್ಟದಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ.

ಎಲ್ಲೆಡೆ 144 ಕಲಂ ಜಾರಿಯಲ್ಲಿ ಇರುವುದರಿಂದ ಖಾಸಗಿ, ಸರ್ಕಾರಿ ಬಸ್, ವಾಹನಗಳ ಸಂಚಾರ ಇಲ್ಲದಿರುವುದರಿಂದ ಬೆಳೆಗಳಿಗೆ ಮಾರುಕಟ್ಟೆ, ಖರೀದಿದಾರರು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದೇವೆ.

‘ಕಲ್ಲಂಗಡಿ ಬೆಳೆಯಲ್ಲಿ ಉತ್ತಮ ಲಾಭ ಪಡೆಯಬಹುದು ಎಂದು ಇತರರ ಬಳಿ ಸಾಲ ಮಾಡಿ ಎರಡು, ಮೂರು ಎಕರೆ ಹೊಲದಲ್ಲಿ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಫಲವತ್ತಾದ ಬೆಳೆಯನ್ನು ಬೆಳೆದಿದ್ದೇನೆ. ಇನ್ನೇನು ಕಲ್ಲಂಗಡಿ ಮಾರಾಟದಿಂದ ಕೈ ತುಂಬಾ ಸಂಪಾದನೆ ಮಾಡಿ ಸಾಲವನ್ನು ತೀರಿಸಿ ಉತ್ತಮ ಬದುಕು ನಡೆಸಬೇಕು ಎನ್ನುವಷ್ಟರಲ್ಲಿ ದೇಶಕ್ಕೆ ಪೆಡಂಭೂತವಾಗಿ ಕಾಲಿಟ್ಟ ಕೊರೊನಾ ವೈರಾಣುವಿನಿಂದಾಗಿ ಮಾರುಕಟ್ಟೆಯಲ್ಲಿ ಜನರು, ವಾಹನಗಳು ಇಲ್ಲದಾಗಿದ್ದು, ಅನ್ಯಾಯವಾಗಿ ನಾಲ್ಕೈದು ಲಕ್ಷ ರೂಪಾಯಿ ಮೌಲ್ಯದ ಬೆಳೆ ಕಣ್ಣೇದುರಲ್ಲೇ ಭೂಮಿಯ ಪಾಲಾಗುತ್ತಿದೆ‘ ಎಂದು ಕಲ್ಲಂಗಡಿ ಬೆಳೆದ ಖಟಕ ಚಿಂಚೋಳಿ ಗ್ರಾಮದ ಪ್ರಭುರಾವ್ ರಾಜೋಳ್ಳೆ, ಸುರೇಶ ಅಲ್ಲುರೆ, ಮಹೇಶ್ ಕಡಗಂಚಿ ಅಳಲು ತೋಡಿಕೊಂಡರು.

ಮೂರು ಎಕರೆ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆ ಇಲ್ಲದಿರುವುದರಿಂದ ಅವುಗಳನ್ನು ಕಡಿದು ಒಂದೆಡೆ ಗುಡ್ಡೆ ಹಾಕಿದ್ದೇನೆ. ಕೆಲ ರೈತರು ಟ್ರ್ಯಾಕ್ಟರ್ ಗಳಲ್ಲಿ ತುಂಬಿಕೊಂಡು ಇತರ ಗ್ರಾಮಗಳಿಗೆ ಮಾರಾಟಕ್ಕೆ ತೆರಳಿದರು ಜನರು ಕೊರೊನಾ ವೈರಾಣು ಹರಡುವಿಕೆಯ ಭೀತಿಯಿಂದ ಖರೀದಿಗೆ ಮುಂದೆ ಬರುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಅವುಗಳನ್ನು ಕಡಿದು ಹೊಲದ ಬದಿಗೆ ಹಾಕುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಿ ಅನ್ನದಾತರ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ಕಡಗಂಚಿ ಸರ್ಕಾರವನ್ನು ಒತ್ತಾಯಿಸುತ್ತಾರೆ.

*
ಕೈ ತುಂಬಾ ಆದಾಯ ಗಳಿಸುತ್ತೇವೆ ಎಂಬ ರೈತರ ನಿರೀಕ್ಷೆ ನುಚ್ಚು ನೂರಾಗಿದ್ದು, ಸರ್ಕಾರ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.
–ವಿಜಯಕುಮಾರ ಕಡಗಂಚಿ, ರೈತ, ತಾ.ಪಂ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು