ಮಂಗಳವಾರ, ಜೂನ್ 2, 2020
27 °C
ಕೋವಿಡ್ 19 ಸೋಂಕಿತರಿಗೆ ಮುಂದುವರಿದ ಚಿಕಿತ್ಸೆ

ಬೀದರ್‌: ಬ್ರಿಮ್ಸ್‌ಗೆ ಬೇಕು ಇನ್ನಷ್ಟು ಸೌಲಭ್ಯ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಇಲ್ಲಿಯ ಬ್ರಿಮ್ಸ್‌ ಬೋಧಕ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಕೋವಿಡ್–19 ಸೋಂಕಿತ 10 ಜನರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮುಂದುವರಿದಿದೆ. ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ, ಇದೀಗ ನರ್ಸಿಂಗ್‌ ಸ್ಟಾಫ್‌ಗಳಿಂದ ಸೋಂಕು ಹರಡುವ ಭೀತಿ ಎದುರಾಗಿದೆ.

ಕೋವಿಡ್ 19 ಸೋಂಕಿತರಿಗೆ ತಜ್ಞ ವೈದ್ಯರ ಸಲಹೆ ಪಡೆದು ಕಿರಿಯ ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ಸುಮಾರು 14 ಜನ ನರ್ಸಿಂಗ್ ಸಿಬ್ಬಂದಿ ರೋಗಿಗಳ ಉಪಚಾರದಲ್ಲಿ ತೊಡಗಿದ್ದಾರೆ. ಆರಂಭದಲ್ಲಿ ನರ್ಸಿಂಗ್‌ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಿಲ್ಲ. ಮಾಸ್ಕ್‌ ಸಹ ತಡವಾಗಿ ಕೊಡಲಾಗಿದೆ. ಅವರು ವಾರ್ಡ್‌ ಒಳಗೆ ಚಿಕಿತ್ಸೆ ಕೊಟ್ಟ ನಂತರ ಹೊರಗೆ ಬಂದು ಅನೇಕ ಜನರೊಂದಿಗೆ ಬೆರತಿದ್ದಾರೆ. ಇದು ಆಸ್ಪತ್ರೆಯ ಇನ್ನುಳಿದ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಕೆಲವರು ಡ್ಯೂಟಿ ಮುಗಿಸಿ ಮೇಲಧಿಕಾರಿಗಳಿಗೆ ಗೊತ್ತಾಗದಂತೆ ಮನೆಗಳಿಗೆ ಹೋಗಿ ಬಂದಿದ್ದಾರೆ. ಇದನ್ನು ಅರಿತ ಅಧಿಕಾರಿಗಳು ಮೂರು ದಿನಗಳಿಂದ ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.

ಬ್ರಿಮ್ಸ್‌ಗೆ 200 ಗುಣಮಟ್ಟದ ಪಿಪಿಇ ಕಿಟ್‍ಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು, ಏಪ್ರಿಲ್ 4 ರಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರು. ಆದರೆ, ಬ್ರಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡುವ ತಂತ್ರಜ್ಞರಿಗೆ ಪಿಪಿಇ ಕೊಟ್ಟಿಲ್ಲ. ಅವರು ರೇನ್‌ಕೋಟ್‌ ಹಾಕಿಕೊಂಡು ಸ್ಕ್ಯಾನಿಂಗ್‌ ಮಾಡಬೇಕಾದ ಸ್ಥಿತಿ ಬಂದೊದಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಯೇ ಹೇಳುತ್ತಿದ್ದಾರೆ.

‘ಕೋವಿಡ್‌19 ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಇದರ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರಲಿಲ್ಲ. ಆದರೆ, ನಂತರ ಎಲ್ಲರಿಗೂ ಪಾವರ್‌ ಪಾಯಿಂಟ್‌ ಪ್ರಜೆಂಟೇಷನ್‌ ಮೂಲಕ ತಿಳಿವಳಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯಿಂದ ಕಾಲಕಾಲಕ್ಕೆ ಬಂದ ಮಾರ್ಗದರ್ಶಿ ನಿಯಮಗಳನ್ನು ಪಾಲನೆ ಮಾಡಲಾಗಿದೆ. ನರ್ಸಿಂಗ್‌ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ವಿಜಯಕುಮಾರ ಅಂತಪ್ಪನವರ ಸ್ಪಷ್ಟಪಡಿಸಿದ್ದಾರೆ.

‘ಏಪ್ರಿಲ್ 2ರಂದು 2,000 ಕಫ್ ಸಿರಫ್, 11,164 ಮೂರು ಪದರಿನ ಮಾಸ್ಕ್‌ಗಳು, 8 ವೈರಲ್ ಟ್ರಾನ್ಸ್ ಪೋರ್ಟ್ ಮಿಡಿಯಾ, 2,500 ಎನ್-95 ಮಾಸ್ಕ್‌ಗಳು, 1,200 ಪಿಪಿಇ ಕಿಟ್‍ಗಳನ್ನು ಖರೀದಿಸಲಾಗಿದೆ. ಸಂಬಂಧಪಟ್ಟವರಿಗೆ ಹಂತ ಹಂತವಾಗಿ ವಿತರಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

ಕೋವಿಡ್ 19 ಮಾರಣಾಂತಿಕವಾಗಿರುವ ಕಾರಣ ಸೋಂಕಿತರನ್ನು ನೋಡಿಕೊಳ್ಳುತ್ತಿರುವ ನರ್ಸಿಂಗ್‌ ಸಿಬ್ಬಂದಿಗೂ ಪಿಪಿಇ ಕಿಟ್‍ಗಳನ್ನು ಕೊಡಬೇಕು. ಅವರ ಆರೋಗ್ಯದ ಜಿಲ್ಲಾಡಳಿತ ಕಾಳಜಿ ವಹಿಸಬೇಕು ಎಂದು ನರ್ಸಿಂಗ್‌ ಸಿಬ್ಬಂದಿ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು