ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಅಕ್ಕ ಅನ್ನಪೂರ್ಣ ಮನವಿ
Last Updated 5 ಫೆಬ್ರುವರಿ 2019, 14:25 IST
ಅಕ್ಷರ ಗಾತ್ರ

ಬೀದರ್‌: ‘ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸದಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಈ ಅಸಮಾಧಾನ ನಿವಾರಿಸಿ, ವಿಶೇಷ ಪ್ಯಾಕೇಜ್ ನೀಡುವ ಮೂಲಕ ಇಲ್ಲಿಯ ಜನರ ಜೀವನ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ, ಅಖಂಡ ಕರ್ನಾಟಕದ ಉಳಿವಿಗೆ ಪ್ರಯತ್ನಿಸಬೇಕು’ ಎಂದು ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಅಕ್ಕ ಅನ್ನಪೂರ್ಣ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಆರಂಭವಾದ ಜಿಲ್ಲಾ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನವರಿಗೆ ಬೀದರ್ ಎಂದರೆ ಕಾಡು ಪ್ರದೇಶವೆಂಬ ಭಾವ ಈ ಮೊದಲು ಇತ್ತು. ಆದರೆ ಈಗ ಅದು ಸ್ವಲ್ಪ ಮಟ್ಟಿಗೆ ದೂರವಾಗಿದೆ. ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ಸಂಚಾರ ಪ್ರಾರಂಭವಾದರೆ ಬೀದರ್‌ಗೆ ಬರಲು ದೊಡ್ಡ ದೊಡ್ಡ ಉದ್ದಿಮೆದಾರರು ಮನಸ್ಸು ಮಾಡುತ್ತಾರೆ. ನಮ್ಮವರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ದೂರದ ನಗರಗಳಿಗೆ ಜನ ವಲಸೆ ಹೋಗುವುದು ತಪ್ಪಲಿದೆ’ ಎಂದರು.

‘ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಸರ್ಕಾರ ಚಿಂತನೆಗೈದು ಕಬ್ಬಿಗೆ ಯೋಗ್ಯ ಬೆಲೆ ನೀಡಿ ದುಡಿಯುವ ರೈತರನ್ನು ಗೌರವಿಸಬೇಕು. ನಾಡಿಗಾಗಿ ಭೂಮಿ ಕಳೆದುಕೊಂಡ ಕಾರಂಜಾ ಸಂತ್ರಸ್ತರಿಗೆ, ರಾಜ್ಯದ ಇತರೆ ಭಾಗಗಳ ಸಂತ್ರಸ್ತರ ಮಾದರಿಯ ಪರಿಹಾರ ಕೊಟ್ಟು ಅಸಮಾನತೆಯನ್ನು ಸರಿಪಡಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯ ಸರ್ಕಾರ ಕನ್ನಡದ ಶಾಲೆಗಳಿಗೆ ಕೀಲಿ ಜಡಿಯುವುದನ್ನು ನಿಲ್ಲಿಸಬೇಕು. ಇಂಗ್ಲಿಷ್ ಶಾಲೆ ತೆರೆಯುವುದನ್ನು
ಕನ್ನಡಿಗರು ಗಂಭೀರವಾಗಿ ಪರಿಗಣಿಸಿ ಪ್ರತಿಭಟಿಸಬೇಕು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮಾತೃಭಾಷೆಯಲ್ಲಿ ಓದಿದ್ದಾರೆ. ಹೀಗಾಗಿ ಸರ್ಕಾರ ಅಥವಾ ಜನ ಸಾಮಾಜಿಕ ನ್ಯಾಯ ಎಂಬ ನೆಪ ಹೇಳಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT