ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ವೈದ್ಯಕೀಯ ಸಾಮಗ್ರಿ ಲಭ್ಯ

ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಹೇಳಿಕೆ
Last Updated 5 ಏಪ್ರಿಲ್ 2020, 9:56 IST
ಅಕ್ಷರ ಗಾತ್ರ

ಬೀದರ್: ಕೋವಿಡ್-19 ಸೋಂಕಿತರಿಗೆ ಎಲ್ಲ ಹಂತದ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ವೈದ್ಯಕೀಯ ಸಾಮಗ್ರಿಗಳು ಲಭ್ಯ ಇವೆ. ಈ ವಿಷಯದಲ್ಲಿ ಗೊಂದಗಳು ಬೇಡ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ಸಾರ್ವಜನಕರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್-19 ಸೋಂಕಿತರು ಹಾಗೂ ಶಂಕಿತರ ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಜಿಲ್ಲಾಡಳಿತವು ಜಾಗೃತವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿತ್ಯ ವೈದ್ಯಾಧಿಕಾರಿಗಳ ಸಭೆ ನಡೆಸಿ ಆಸ್ಪತ್ರೆಯಲ್ಲಿನ ಸ್ಥಿತಿಗತಿಯ ಬಗ್ಗೆ ಮತ್ತು ಚಿಕಿತ್ಸೆ ಪಡೆಯುತ್ತಿರುವ ಜನರ ಆರೋಗಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ತಾಲ್ಲೂಕು ವೈದ್ಯಾಧಿಕಾರಿಗಳ ಜತೆಗೆ ಮಾತನಾಡಿ ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಚೆಕ್ ಪೋಸ್ಟ್‌ ಗಳಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಅದು ಇಲ್ಲ, ಇದು ಇಲ್ಲ ಎಂದು ವದಂತಿ ಹಬ್ಬಿಸುವವರ ಬಗ್ಗೆ ಕಿವಿಗೊಡಬೇಡಿ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ವೆಂಟಿಲೇಟರ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ವೈದ್ಯಕೀಯ ಉಪಕರಣಗಳ ಕಿಟ್‍ಗಳು ಸೇರಿದಂತೆ ಗುಣಮಟ್ಟದ ಮಾಸ್ಸ್, ಸ್ಯಾನಿಟೈಜರ್‌ಗಳು ಆಸ್ಪತ್ರೆಯಲ್ಲಿ ಲಭ್ಯ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಏಪ್ರೀಲ್ 2ರಂದು 2000 ಕಫ್ ಸಿರಫ್, 11164 ಮೂರು ಪದರಿನ ಮಾಸ್ಕ್ ಗಳು, 8 ವೈರಲ್ ಟ್ರಾನ್ಸ್ ಪೋರ್ಟ ಮಿಡಿಯಾ., 2500 ಎನ್-95 ಮಾಸ್ಕ್‌ಗಳು, 1200 ಪಿಪಿಇ ಕಿಟ್‍ಗಳು ಸೇರಿದಂತೆ ಎಲ್ಲ ಬಗೆಯ ಸಾಮಗ್ರಿಗಳನ್ನು ಸಂಬಂಧಪಟ್ಟವರಿಂದ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಿಗೆ 145, ಸಮುದಾಯ ಆರೋಗ್ಯ ಕೇಂದ್ರಗಳಿಗೆ 148, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 159, ಜಿಲ್ಲಾ ಆಸ್ಪತ್ರೆಗೆ 100 ಮತ್ತು ಬ್ರಿಮ್ಸ್ ಗೆ 500 ಎನ್-95 ಮಾಸ್ಕ್‌ ಗಳನ್ನು ವಿತರಿಸಲಾಗಿದೆ. ಅದೇ ರೀತಿ ಗುಣಮಟ್ಟದ ಪಿಪಿಇ ಕಿಟ್‍ಗಳನ್ನು ತಾಲ್ಲೂಕು ಆಸ್ಪತ್ರೆಗಳಿಗೆ 117, ಸಮುದಾಯ ಆರೋಗ್ಯ ಕೇಂದ್ರಗಳಿಗೆ 118, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 118 ಮತ್ತು ಬ್ರಿಮ್ಸ್ ಗೆ 200 ವಿತರಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆ ಸಂಪೂರ್ಣ ಸ್ತಬ್ಧ

ಕೋವಿಡ್‌ 19 ಸೋಂಕು ಹರಡುವಿಕೆ ತಡೆಯುವ ದಿಸೆಯಲ್ಲಿ ಜಿಲ್ಲಾಡಳಿತ ಆಡಳಿತ ಯಂತ್ರವನ್ನು ಇನ್ನಷ್ಟು ಬಿಗುವುಗೊಳಿಸಿದೆ. ಬರುವ ಹತ್ತು ದಿನ ಸಾರ್ವಜನಿಕರು ಇನ್ನ‌ಷ್ಟು ಕಠಿಣವಾದ ನಿಯಮಗಳ ಪಾಲನೆ ಮಾಡಬೇಕಾಗಲಿದೆ.

ಲಾಕ್‌ಡೌನ್‌ ಹಿನ್ನಲೆಯಲ್ಲಿ ಜನರು ಶನಿವಾರ ಮನೆಗಳಿಂದ ಹೊರ ಬರಲಿಲ್ಲ. ನಗರದಲ್ಲಿ ಬೆರಳೆಣಿಯ ಮೆಡಿಕಲ್‌ ಸ್ಟೋರ್‌ಗಳನ್ನು ಬಿಟ್ಟರೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ತರಕಾರಿ ಅಂಗಡಿಗಳಲ್ಲೂ ಜನ ಕಂಡು ಬರಲಿಲ್ಲ. ಎರಡು ದಿನಗಳಿಂದ ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿರುವ ಕಾರಣ ಜನ ದಿನಸಿ ವಸ್ತುಗಳ ಖರೀದಿಗೆ ಪರದಾಡಬೇಕಾಯಿತು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣರೆಡ್ಡಿ ಹಾಗೂ ಜಿಲ್ಲಾಧಿಕಾರಿ ಎಚ್‌.ಆರ್‌.ಆರ್‌.ಮಹಾದೇವ ಅವರು ಓಲ್ಡ್‌ಸಿಟಿಯ ಪ್ರಮುಖ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಗಣ್ಯರ ಸಭೆ ಕರೆದು ಲಾಕ್‌ಡೌನ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿದ್ದವರು ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.

ಪೊಲೀಸರು ನಗರದಲ್ಲಿ ಬಿಗಿ ಬಂದೋಬಸ್ತ್‌ ಮಾಡಿರುವ ಕಾರಣ ಓಲ್ಡ್‌ಸಿಟಿಯೊಳಗೆ ಯಾರೂ ಪ್ರವೇಶ ಮಾಡಲಿಲ್ಲ. ವೈದ್ಯಕೀಯ ಕಾರಣಕ್ಕೆ ಕೆಲವರಿಗೆ ಮಾತ್ರ ಅವಕಾಶ ಮಾಡಿಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT