ಸೋಮವಾರ, ಜನವರಿ 17, 2022
18 °C
ಜಿಲ್ಲಾ ಆಡಳಿತ ಕಾರ್ಯಯೋಜನೆ: ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಭ್ಯತೆಗೆ ಕ್ರಮ

ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಲಸಿಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾ ಆಡಳಿತವು ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣಕ್ಕೆ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಲು ಕಾರ್ಯ ಯೋಜನೆ ರೂಪಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಮುಖ್ಯ ವೈದ್ಯರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕೋವಿಡ್ ಲಸಿಕೆ ಪಡೆಯಲು ಅವಕಾಶ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಲಸಿಕಾ ಕೇಂದ್ರ ಎಂದು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಲಾಗಿನ್ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ನೀಡಲಾಗುತ್ತಿದೆ. ಈ ಮೂಲಕ ಆಯಾ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 10-15 ಆಸ್ಪತ್ರೆಗಳು ಖಾಸಗಿ ಕೋವಿಡ್ ಲಸಿಕೆ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದ 235 ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಲಭ್ಯತೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಂದೇಹ ಕೇಳಿ: ಖಾಸಗಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ತಮ್ಮ ಸಂದೇಹಗಳನ್ನು ವೈದ್ಯರ ಬಳಿ ಕೇಳಿ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರವು ಸಾರ್ವಜನಿಕರ ಹಿತಕಾಪಾಡಲು ಬದ್ಧವಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಕೊಡಬೇಕು ಎನ್ನುವ ಉದ್ದೇಶದೊಂದಿಗೆ ಕೋವಿಡ್ ಲಸಿಕಾಕರಣ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಮೂರನೇ ಅಲೆ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಬರಬಹುದು ಎಂಬ ಆತಂಕವನ್ನು ತಜ್ಞ ವೈದ್ಯರು ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಮೂರನೇ ಅಲೆ ಬೀದರ್ ಜಿಲ್ಲೆಗೆ ಬರದ ಹಾಗೆ ಅರ್ಹರು ಲಸಿಕೆ ತೆಗೆದುಕೊಂಡು ರೋಗ ನಿರೋಧಕ ಶಕ್ತಿ ಪಡೆಯಬೇಕು ತಿಳಿಸಿದರು.

ಈ ವೇಳೆ ಮಾತನಾಡಿದ ಹಿರಿಯ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಸಂಘ, ನಸಿರ್ಂಗ್ ಹೋಮ್ ಅಸೋಸಿಯೇಷನ್ ಪ್ರಮುಖರು, ನಾವೆಲ್ಲ ಒಗ್ಗೂಡಿ ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತೇವೆ. ನಮ್ಮ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ತಪ್ಪದೆ ಲಸಿಕೆ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ., ಐಎಂಎ ಅಧ್ಯಕ್ಷ ಡಾ.ವಿನೋದ ಸಾವಳಗಿ, ಹಿರಿಯ ವೈದ್ಯರಾದ ಡಾ.ಚಂದ್ರಕಾಂತ ಗುದಗೆ, ಡಾ.ಸಿ.ಆನಂದರಾವ್, ಡಾ.ಸರಿತಾ ಬದಭದೆ, ಡಾ. ಉಮಾ ದೇಶಮುಖ, ಡಾ.ರಜನೀಶ ವಾಲಿ, ಡಾ.ಮಹೇಶ ತೊಂಡಾರೆ, ಶರಣಯ್ಯ ಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು