ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆಯಿಂದ ಸಂಕಟ: ಕಾಸಿಂ ಅಲಿ

Last Updated 3 ಡಿಸೆಂಬರ್ 2020, 14:07 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಸರ್ಕಾರ ಜಾರಿಗೊಳಿ ಸಲಿ ರುವ ಗೋಹತ್ಯೆ ನಿಷೇಧ ಕಾಯ್ದೆ ಯಿಂದ ಮುಸ್ಲಿಂ ಸಮುದಾಯದವರು ಅಷ್ಟೇ ಅಲ್ಲ; ಎಲ್ಲ ಸಮುದಾಯಗಳ ಬಡವರಿಗೆ ಸಂಕಟ ಎದುರಾಗಲಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕಾಸಿಂ ಅಲಿ ಹೇಳಿದರು.

ಆಲ್ ಜಮೈತುಲ್ ಖುರೇಷ ಸಂಘಟನೆಯಿಂದ ಮಂಗಳವಾರ ಇಲ್ಲಿ ಆಯೋಜಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವ ಸಮಾವೇಶದಲ್ಲಿ ಮಾತನಾಡಿದರು.

‘ಈ ಕಾನೂನು ಬರೀ ಗೋಹತ್ಯೆ ಮಾತ್ರವಲ್ಲ. ಎತ್ತು, ಎಮ್ಮೆ, ಕೋಣಗಳ ಹತ್ಯೆಯನ್ನೂ ನಿಷೇಧಿಸುತ್ತದೆ. ಪ್ರವಾಹ, ಬರಗಾಲದಂಥ ಪ್ರಾಕೃತಿಕ ವಿಕೋಪಗಳಿಂದ ನಮ್ಮ ರೈತರಿಗೆ ಬರುವ ಆದಾಯ ಅನಿಶ್ಚಿತವಾಗಿರುತ್ತದೆ. ಆದ್ದರಿಂದಲೇ ಅವರು ಹಸು ಸಾಕಾಣಿಕೆ ಕೈಗೊಳ್ಳುತ್ತಾರೆ. ಕಷ್ಟ ಕಾಲದಲ್ಲಿ ಅವುಗಳನ್ನು ಮಾರಾಟ ಮಾಡಿ ಬದುಕುತ್ತಾರೆ. ಒಂದು ವೇಳೆ ಈ ಕಾನೂನು ಜಾರಿಗೊಳಿಸಿದರೆ ಜಾನುವಾರುಗಳನ್ನು ಖರೀದಿಸಲು ಯಾರೂ ಮುಂದೆ ಬರುವುದಿಲ್ಲ’ ಎಂದರು.

‘ದೇಶದ ಜನಸಂಖ್ಯೆಯಲ್ಲಿ ಮಾಂಸಾಹಾರಿಗಳು ಅಧಿಕವಿದ್ದಾರೆ. ಹೀಗಾಗಿ ಮಾಂಸಾಹಾರಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಅನೇಕರಿಗೆ ಮಾಂಸದಿಂದ ದೊರಕುವ ಪ್ರೋಟಿನ್ ಕೊರತೆಯೂ ಕಾಡುತ್ತದೆ’ ಎಂದರು.

ಹಿರಿಯ ಮುಖಂಡ ಅರ್ಜುನ ಕನಕ ಮಾತನಾಡಿ, ‘ಆಹಾರದ ಆಯ್ಕೆ ಮೂಲಭೂತ ಹಕ್ಕು ಆಗಿದೆ. ಅದನ್ನು ಯಾವುದೇ ಸರ್ಕಾರ ಕಿತ್ತುಕೊಳ್ಳುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ಆಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರ ಆಹಾರ ಪದ್ಧತಿಗಳನ್ನು ಗೌರವಿಸಿದ್ದಾರೆ. ಹೀಗಿದ್ದಾಗ ಇಂಥ ಕಾನೂನು ತರುವುದು ಸರಿಯಲ್ಲ’ ಎಂದರು.

ಮುಖಂಡ ಮುಜಾಹಿದಪಾಶಾ ಖುರೇಶಿ ಮಾತನಾಡಿ, ‘ಭಾರತವು ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಗಳನ್ನು ಪರಿಪಾಲಿಸುವ ಜನರನ್ನು ಹೊಂದಿರುವ ದೇಶವಾಗಿದೆ. ಯಾವುದೇ ಒಂದು ಸಮುದಾಯವು ತನ್ನ ಆಚಾರ ವಿಚಾರಗಳೇ ಶ್ರೇಷ್ಠ ಎಂದು ಪ್ರತಿಪಾದಿಸುವುದು ತಪ್ಪಾಗುತ್ತದೆ. ಅಲ್ಲದೆ, ಇತರರ ಆಹಾರ ಪದ್ಧತಿ ತಪ್ಪು ಎಂದು ಹೇಳುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ಒಡಕು ಉಂಟಾಗುತ್ತದೆ. ಗೋಮಾಂಸ ಮಾರಾಟ ಮಾಡುವ ದೊಡ್ಡ ದೊಡ್ಡ ಕಂಪನಿಗಳ ಮೇಲೆ ನಿರ್ಬಂಧ ಹೇರದೆ ಜನಸಾಮಾನ್ಯರನ್ನು ಕಾನೂನಿನ ಪರಿಧಿಯೊಳಗೆ ತರುವುದು ಸರಿಯೇ?’ ಎಂದು ಪ್ರಶ್ನಿಸಿದರು.

ಅಲ್ ಜಮೈತುಲ್ ಖುರೇಷ್ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಅಬ್ದುಲ್ ಸತ್ತಾರ, ಅಸ್ಲಂ, ರೈತ ಮುಖಂಡರಾದ ಚಂದ್ರಶೇಖರ ಜಮಖಂಡಿ, ಸುಭಾಷ ರಗಟೆ, ಮುಖಂಡರಾದ ಮನೋಹರ ಮೈಸೆ, ಯುವರಾಜ ಭೆಂಡೆ, ಮೆರಾಜುದ್ದೀನ್, ಬಹುಜನ ಮುಕ್ತಿ ಮೋರ್ಚಾದ ಮಿಲಿಂದ್ ಹುಬಾರೆ, ಅಬ್ದುಲ್ ಹಮೀದ್ ಖುರೇಷಿ, ರಶೀದ್ ಖುರೇಷಿ ಮಾತನಾಡಿದರು. ಪ್ರಮುಖರಾದ ತಹಶೀನಅಲಿ ಜಮಾದಾರ, ವಾರೀಸ್ ಅಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT