ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಐ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ

ಬರ ಪರಿಹಾರ ಕಾಮಗಾರಿ ನಡೆಸಲು ಆಗ್ರಹ
Last Updated 15 ಜುಲೈ 2019, 15:23 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಿದರು.

ರಾಜ್ಯವು ಮೂರು ವರ್ಷಗಳಿಂದ ಬರ ಎದುರಿಸುತ್ತಿದೆ. ರಾಜ್ಯ ಸರ್ಕಾರ ಬರಕ್ಕೆ ವೈಜ್ಞಾನಿಕ ಕಾರಣ ಕುರಿತು ಅಧ್ಯಯನ ನಡೆಸುತ್ತಿಲ್ಲ. ದೇವಸ್ಥಾನಗಳಲ್ಲಿ ಹೋಮ, ಹವನಗಳನ್ನು ಮಾಡಿಸಲು ಮುಂದಾಗುವ ಮೂಲಕ ಮೂಢನಂಬಿಕೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ದೂರಿದರು.

ರಾಜ್ಯದ 156 ತಾಲ್ಲೂಕುಗಳಲ್ಲಿ ಭೀಕರ ಬರ ಎದುರಾಗಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಯೇ ಇಲ್ಲವಾಗಿದೆ. ಸರ್ಕಾರ ಬರ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೇಂದ್ರ ತಂಡ ರಾಜ್ಯಕ್ಕೆ ಬಂದು ಬರ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಬರ ನಿರ್ವಹಣೆಗೆ ₹30 ಸಾವಿರ ಕೋಟಿ ಅಗತ್ಯವಿದ್ದರೂ ಕೇಂದ್ರ ಸರ್ಕಾರ ಈವರೆಗೆ ₹950 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಆಪಾದಿಸಿದರು.

ಬೀದರ್ ಜಿಲ್ಲೆಯಲ್ಲಿ ₹ 300 ಕೋಟಿ ವೆಚ್ಚದಲ್ಲಿ 300 ಕೆರೆಗಳ ಹೂಳೆತ್ತಲಾಗುವುದು ಎಂದು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ, ಕೆರೆಗಳ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಹೇಳಿದರು.

ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ಒದಗಿಸಿಲ್ಲ. ಕಾಡು ಪ್ರಾಣಿಗಳಿಂದ ಆಗುತ್ತಿರುವ ಬೆಳೆ ಹಾನಿಗೆ ಪರಿಹಾರ ಕಲ್ಪಿಸುತ್ತಿಲ್ಲ. ರೈತರ ತಪ್ಪಾದ ಪಹಣಿಗಳನ್ನು ಸರಿಪಡಿಸುತ್ತಿಲ್ಲ. ಹಣ ಕೊಟ್ಟರೆ ಮಾತ್ರ ರೈತರ ಜಮೀನು ಸರ್ವೇ ಮಾಡಲಾಗುತ್ತಿದೆ ಎಂದು ದೂರಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತಂದು ಚುನಾಯಿತ ವ್ಯಕ್ತಿ ಪಕ್ಷ ಬದಲಿಸಿದರೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರಬೇಕು. ಅರಣ್ಯ ಇಲಾಖೆಯಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆ ನಡೆಸಬೇಕು. ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರ ಮಾಸಾಶನ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಬೇಕು. ಕೆಲ ಹಿರಿಯ ನಾಗರಿಕರ ಮಾಸಾಶನ ರದ್ದುಪಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಚೆ ಇಲಾಖೆಯಲ್ಲಿ ಮಾಸಾಶನ ತಲುಪಿಸಲು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಸಹ ಕಾರ್ಯದರ್ಶಿ ಶಂಕರರಾವ್ ಕಮಠಾಣ, ಮುಖಂಡರಾದ ಮೆಹತಾಬಸಾಬ, ರಾಮಯ್ಯ ಮಠಪತಿ, ಪಾಂಡುರಂಗ ಪ್ಯಾಗೆ, ಪ್ರಭು ಹೂಚಕನಳ್ಳಿ, ಅಹಮ್ಮದ್ ಜಂಬಗಿ, ನಜೀರ್ ಅಹಮ್ಮದ್, ಮುನಿರೊದ್ದಿನ್, ಖಾದರಶಾಹ, ನಿಜಾಮೊದ್ದಿನ್, ಬಾಬುರಾವ್ ಮಾಡೇಕರ್, ಖದೀರಮಿಯ, ಮಚ್ಚೇಂದ್ರ, ಗುರುಪಾದಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT