ಬುಧವಾರ, ನವೆಂಬರ್ 20, 2019
21 °C

ಖಾಸಗೀಕರಣ ನೀತಿ ವಿರೋಧಿಸಿ ಸಿಪಿಐ ಪ್ರತಿಭಟನೆ

Published:
Updated:
Prajavani

ಬೀದರ್: ಸಾರ್ವತ್ರಿಕ ವಲಯದ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ವು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಪಕ್ಷದ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಕೇಂದ್ರವು ದೇಶದ ಆಸ್ತಿಯಾಗಿರುವ ಸಾರ್ವತ್ರಿಕ ವಲಯದ ಕಂಪನಿಗಳ ಷೇರು ಮಾರಾಟ ಮಾಡುತ್ತಿದೆ. ರೈಲ್ವೆ, ಕಲ್ಲಿದ್ದಲು, ರಕ್ಷಣಾ ವಲಯಗಳನ್ನು ಖಾಸಗೀಕರಣಗೊಳಿಸುತ್ತಿದೆ. ಬ್ಯಾಂಕ್‌ಗಳ ವಿಲೀನ ಮಾಡುತ್ತಿದೆ. ಭಾರತ ಪೆಟ್ರೋಲಿಯಂ ಸಂಸ್ಥೆಯನ್ನು ಮಾರಾಟಕ್ಕೆ ಇಟ್ಟಿದೆ. ಕಾರ್ಪೋರೇಟ್ ಸಂಸ್ಥೆಗಳ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.

ಖಾಸಗೀಕರಣ ನೀತಿಯನ್ನು ಕೈಬಿಡಬೇಕು. ಪ್ರಧಾನಮಂತ್ರಿಗೆ ಪತ್ರ ಬರೆದ 49 ಬುದ್ಧಿಜೀವಿಗಳ ಮೇಲೆ ಹೂಡಿರುವ ದೇಶದ್ರೋಹ ಪ್ರಕರಣಗಳನ್ನು ಕೈಬಿಡಬೇಕು. ಗುಂಪು ಹತ್ಯೆ ಮಾಡುತ್ತಿರುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಕರ್ನಾಟಕದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ಅತಿವೃಷ್ಟಿ, ಅನಾವೃಷ್ಟಿ ಕಾರಣ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕು. ಕೂಲಿಯನ್ನು ₹ 500ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ರಾಮಯ್ಯ ಮಠಪತಿ, ಪಾಂಡುರಂಗ ಪ್ಯಾಗೆ, ಪ್ರಭು ಹೂಚಕನಳ್ಳಿ, ರವಿರಾಜ, ಅಹಮ್ಮದ್ ಜಂಬಗಿ, ಮುನಿರೊದ್ದಿನ್, ಜಗನ್ನಾಥ ಮಹಾರಾಜ, ನಜೀರ್ ಅಹಮ್ಮದ್, ಬಾಬುರಾವ್ ವಾಡೇಕರ್, ತುಕಾರಾಮ ಸೋಲಾಪುರೆ, ರಾಮಣ್ಣ ಅಲ್ಮಾಸಪುರ, ಪ್ರಭು.ಟಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)