ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಭರ್ಜರಿ ಬೇಟೆ

₹29 ಲಕ್ಷ ಮೌಲ್ಯದ ಬಂಗಾರ ಜಪ್ತಿ: ಎಸ್‌ಪಿ
Last Updated 19 ಸೆಪ್ಟೆಂಬರ್ 2021, 4:46 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಸದಾನಂದ ಸರಾಫ್ ಬಜಾರನ 39ನೇ ಅಂಗಡಿಯಲ್ಲಿ ಈಚೆಗೆ ನಡೆದಿದ್ದ 10.5 ತೊಲೆ ಬಂಗಾರ ಕಳವಿಗೆ ಸಂಬಂಧಪಟ್ಟಂತೆ 7 ಜನ ಮಹಿಳೆಯರು, ಮೂವರು ಪುರುಷರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರು ಶನಿವಾರ ಇಲ್ಲಿನ ನಗರ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. `ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಅಮರ ಕುಲಕರ್ಣಿ ಹಾಗೂ ಸಿಬ್ಬಂದಿ ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ರಾಮವಾಡಿಯಿಂದ ಈ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಹತ್ತಿರ ನಗರದಲ್ಲಿ ನಡೆದ ಕಳವಿಗೆ ಸಂಬಂಧಪಟ್ಟಂತೆ 10.5 ತೊಲೆ ಬಂಗಾರದ ಆಭರಣಗಳು ಒಳಗೊಂಡು ಜಿಲ್ಲೆಯಲ್ಲಿನ ಇತರೆಡೆ ನಡೆದ ಬಂಗಾರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 40 ತೊಲೆಯ ಬಂಗಾರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಕಳವಿಗೆ ಬಳಸಿದ್ದ ಒಂದು ಬೊಲೆರೋ ವಾಹನ ಕೂಡ ಜಪ್ತಿ ಮಾಡಿಕೊಳ್ಳಲಾಗಿದ್ದು ಇವೆಲ್ಲವುಗಳ ಮೌಲ್ಯ ಒಟ್ಟು ₹ 29.50 ಲಕ್ಷ ಆಗಿದೆ’ ಎಂದಿದ್ದಾರೆ.

`ಈಚೆಗೆ ತಾಲ್ಲೂಕಿನ ಕೊಹಿನೂರ ಗ್ರಾಮದಲ್ಲಿ ನಡೆದ ಎಟಿಎಂ ಯಂತ್ರ ಒಡೆದು ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ತಾಲ್ಲೂಕಿನ ರಾಮತೀರ್ಥ ಗ್ರಾಮದ ಶ್ರೀರಂಗ ಕಾರಬಾರಿ, ರಾಮ ಜಮಾದಾರ, ಪ್ರಶಾಂತ ಎನ್ನುವವರನ್ನು ಬಂಧಿಸಲಾಗಿದೆ. ಇವರು ಇತರೆ ಕಳವಿನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದು, ಇವರಿಂದ 1 ತೊಲೆ ಬಂಗಾರ, ಒಂದು ಗ್ಯಾಸ್ ಸಿಲೆಂಡರ್ ಹಾಗೂ ಹಿರೋ ಸ್ಪ್ಲೆಂಡರ್ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ₹1,09,000 ಆಗಿದೆ’ ಎಂದಿದ್ದಾರೆ.

ಮುಡಬಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ 500 ಚೀಲ ಸಕ್ಕರೆ ಸಮೇತ ಲಾರಿ ತೆಗೆದುಕೊಂಡು ಚಾಲಕ ಹಾಗೂ ಅವನ ಸಂಗಡಿಗರು ಓಡಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಮೊಹಮ್ಮದ ಪಾಶಾ ಅವರು ನೀಡಿದ ದೂರಿನನ್ವಯ ಸದರಿ ಪ್ರಕರಣದ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ.

ಸಕ್ಕರೆ ಒಳಗೊಂಡು ಒಟ್ಟು ₹ 6,52,050 ಮೌಲ್ಯದ ಸ್ವತ್ತನ್ನು ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಮೂರು ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಪರಿಶ್ರಮಪಟ್ಟಿರುವ ಬಸವಕಲ್ಯಾಣ, ಮಂಠಾಳ, ಮುಡಬಿ ಠಾಣೆಗಳ ತಂಡಗಳಿಗೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT