ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಲಗ್ಗೆ ಇಟ್ಟ ಸೀತಾಫಲ

ಮುಂಗಾರು ಮಳೆ ಅಧಿಕವಾಗಿರುವುದರಿಂದ ಫಸಲು ಹೆಚ್ಚಳ
Last Updated 1 ಅಕ್ಟೋಬರ್ 2020, 8:37 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣ, ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಗಾಗುತ್ತಿದ್ದಂತೆ ರಸ್ತೆ ಬದಿಗಳಲ್ಲಿ ಮಹಿಳೆಯರು ಸಾಲು-ಸಾಲಾಗಿ ಕುಳಿತು ಸೀತಾ­ಫಲ ಮಾರಾಟ ಮಾಡುವ ದೃಶ್ಯ ಕಂಡುಬರುತ್ತಿದೆ.

ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿರುವುದರಿಂದ ಈ ಬಾರಿಯ ಹಂಗಾಮಿನಲ್ಲಿ ಸೀತಾಫಲದ ಇಳುವರಿ ಅಧಿಕ ಪ್ರಮಾಣದಲ್ಲಿ ಬಂದಿದೆ. ಹಣ್ಣುಗಳು ಕೂಡ ಹೆಚ್ಚು ಸ್ವಾದಿಷ್ಟ ಹಾಗೂ ರುಚಿಕರವಾಗಿವೆ.

ತಾಲ್ಲೂಕಿನ ಚಾಂಗಲೇರಾ, ಕರಕನಳ್ಳಿ, ಅಲ್ಲಿಪುರ್‍, ಭಾದ್ಲಾಪುರ್‍, ದೇವಗಿರಿ ತಾಂಡಾ, ಉಡಬಾಳ್-ಮುಸ್ತರಿ ರಸ್ತೆ ಪಕ್ಕದ ಅರಣ್ಯ ಪ್ರದೇಶಗಳಲ್ಲಿ ಹಾಗೂ ರೈತರ ಹೊಲ­–ಗದ್ದೆಗಳ ಬದುವಿನಲ್ಲಿ ನೈಸರ್ಗಿಕವಾಗಿ ಸೀತಾಫಲದ ಗಿಡಗಳು ಹೇರಳವಾಗಿ ಬೆಳೆದಿವೆ. ಎಲ್ಲ ಗಿಡಗಳಿಗೂ ಅಧಿಕ ಪ್ರಮಾಣದಲ್ಲಿ ಫಸಲು ಬಂದಿದೆ.

ದನ ಮತ್ತು ಕುರಿಗಾಹಿಗಳು ಸೇರಿದಂತೆ ಹೆಚ್ಚಾಗಿ ತಾಂಡಾಗಳ ಮಹಿಳೆಯರು ಗುಡ್ಡಗಾಡುಗಳಲ್ಲಿ ಸುತ್ತಾಡಿ ಸೀತಾಫಲ ಕಾಯಿಗಳನ್ನು ಕಿತ್ತುಕೊಂಡು ಮನೆಗೆ ತರುತ್ತಾರೆ. ಎರಡು-ಮೂರು ದಿನಗಳ ಕಾಲ ಹುಲ್ಲಿನಲ್ಲಿಟ್ಟು ಕಾವಿನಿಂದ ಹಣ್ಣುಮಾಡುತ್ತಾರೆ. ಹಣ್ಣಿನ ಗಾತ್ರ ಮತ್ತು ಬಣ್ಣ ಆಧರಿಸಿ ಬೇರೆ ಬೇರೆ ಬುಟ್ಟಿಗಳಲ್ಲಿ ತುಂಬುತ್ತಾರೆ.

ನಿತ್ಯ ನಸುಕಿನ ಜಾವದಲ್ಲಿಯೇ ಮನೆಗಳಿಂದ 40–50 ಬುಟ್ಟಿಗಳನ್ನು ಜೀಪ್‌ನಲ್ಲಿ ಹಾಕಿಕೊಂಡು ಪಟ್ಟಣ, ನಿರ್ಣಾ, ಮನ್ನಾಎಖ್ಖೇಳಿ, ತಾಳಮಡಗಿ, ಬೇಮಳಖೇಡಾ, ಕುಡಂಬಲ್, ಉಡಬಾಳ್ ಗ್ರಾಮಗಳಿಗೆ ಕೊಂಡೊಯ್ದು ಮಾರಾಟ ಮಾಡುವುದು ಅವರ
ಈ ಹಂಗಾಮಿನ ಮುಖ್ಯ ಕಾಯಕವಾಗಿದೆ.

ಪಟ್ಟಣದ ಬಸವರಾಜ್ ಚೌಕ್, ಗಾಂಧಿ ಚೌಕ್, ಹಳೆ ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಸಾಲು-ಸಾಲಾಗಿ ಕುಳಿತು ಹಣ್ಣು ಮಾರಾಟ ಮಾಡುತ್ತಿದ್ದಾರೆ. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಗಟು ಬೆಲೆಯಲ್ಲಿ ಹಣ್ಣಿನ ಬುಟ್ಟಿಗಳು ಖರೀದಿ ಮಾಡುತ್ತಿರುವುದರಿಂದ ಮಹಿಳೆಯರು ಬೇಗ ಮಾರಾಟ ಮಾಡಿ ಮಧ್ಯಾಹ್ನದ ಹೊತ್ತಿಗೆ ತಮ್ಮ ಊರು ಸೇರಿಕೊಳ್ಳುತ್ತಾರೆ.

ಕೋವಿಡ್ ಸೋಂಕಿನಿಂದ ಸರ್ಕಾರ, ಶಾಲೆಗಳಿಗೆ ರಜೆ ನೀಡಿರುವುದರಿಂದ ಈ ಬಾರಿ ಮಕ್ಕಳು ಕೂಡ ಕಾಯಿ ಕಡಿಯುವುದರಿಂದ ಹಿಡಿದು ಮಾರಾಟದವರೆಗೂ ತೊಡಗಿರುವುದು ಕಂಡುಬಂದಿದೆ.

ಮುಂದಿನ ಎರಡು ಮೂರು ವಾರ ಮಾತ್ರ ಮಾರಾಟದ ಭರಾಟೆ ಇರುವುದರಿಂದ ಮನೆಯಲ್ಲಿನ ವೃದ್ಧರ ಸಹಾಯದೊಂದಿಗೆ ಮಹಿಳೆಯರು ಮಾರಾಟಕ್ಕೆ ನಿಲ್ಲುತ್ತಾರೆ. ಒಂದು ಹಣ್ಣಿಗೆ ಐದರಿಂದ ಹತ್ತು ರೂಪಾಯಿ ವರೆಗೂ, ಒಂದು ಬುಟ್ಟಿಗೆ ₹200–300 ದರ ನಿಗದಿ ಮಾಡಿರುತ್ತಾರೆ.

‘ವಾಹನ ಸೌಕರ್ಯ ಕೊರತೆಯಿಂದ ತಾಂಡಾಗಳಿಂದ ಪಟ್ಟಣ, ಗ್ರಾಮಗಳಿಗೆ ಹಣ್ಣು ತೆಗೆದುಕೊಂಡು ಹೋಗುವುದು ಕಷ್ಟ. ರಸ್ತೆ ಬದಿಯಲ್ಲಿ ಬಿಡಿಬಿಡಿಯಾಗಿ ಮಾರಾಟದಲ್ಲಿ ತೊಡಗುವುದರಿಂದ ಅನೇಕರಿಗೆ ಸರಿಯಾದ ಬೆಲೆ ಕೂಡ ಸಿಗುವುದಿಲ್ಲ’ ಎಂದು ಬಾದ್ಲಾಪುರ ನಿವಾಸಿ ಪುನು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT