ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌–ಬೆಂಗಳೂರು ಮಧ್ಯೆ ಶೀಘ್ರ ನಿತ್ಯ ವಿಮಾನ ಸಂಚಾರ

ಮಾರ್ಚ್ 4ರಿಂದ ಬೀದರ್–ಕಲಬುರಗಿ ನಡುವೆ ಇನ್ನೊಂದು ರೈಲು: ಖೂಬಾ
Last Updated 1 ಮಾರ್ಚ್ 2023, 15:59 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌–ಬೆಂಗಳೂರು ಮಧ್ಯೆ ಶೀಘ್ರ ನಿತ್ಯ ವಿಮಾನ ಸಂಚಾರ ಶುರುವಾಗಲಿದೆ. ವಿಮಾನದಲ್ಲಿ ಬೆಳಿಗ್ಗೆ ಬೀದರ್‌ನಿಂದ ಬೆಂಗಳೂರಿಗೆ ಹೋಗಿ ಸಂಜೆ ಬೀದರ್‌ಗೆ ಬರಬಹುದಾಗಿದೆ’ ಎಂದು ಕೇಂದ್ರದ ರಾಸಾಯನಿಕ, ರಸಗೊಬ್ಬರ ಹಾಗೂ ನವೀಕೃತ ಇಂಧನ ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ನೌಬಾದ್ ಹತ್ತಿರ ಬೀದರ್-ಭಾಲ್ಕಿ-ನಾಂದೇಡ್ ರಾಷ್ಟ್ರೀಯ ಹೆದ್ದಾರಿ(ಸಂಖ್ಯೆ 50)ಗೆ ಹೊಂದಿಕೊಂಡು ₹ 94.63 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚತುಷ್ಪಥ ರೈಲ್ವೆ ಓವರ್ ಬ್ರಿಡ್ಜ್ (ಆರ್‍ಓಬಿ) ಸಂಚಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಸ್ತುತ ಬೀದರ್‌–ಬೆಂಗಳೂರು ಮಧ್ಯೆ ವಾರದಲ್ಲಿ ಮೂರು ಬಾರಿ ಮಾತ್ರ ವಿಮಾನ ಸಂಚರಿಸುತ್ತಿದೆ. ವಾರಪೂರ್ತಿ ವಿಮಾನ ಯಾನ ಸೇವೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ’ ಎಂದು ತಿಳಿಸಿದರು.


‘ಮಾರ್ಚ್ 4ರಂದು ಬೆಳಿಗ್ಗೆ 10 ಗಂಟೆಗೆ ಬೀದರ್‌–ಕಲಬುರಗಿ ಇಂಟರ್‌ಸಿಟಿ ಡೆಮೊ ರೈಲು ಶುರುವಾಗಲಿದೆ. ಬೀದರ್–ಕಲಬುರಗಿ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಬೀದರ್‌ ಜಿಲ್ಲೆಗೆ ಒಂದು ಸೈನಿಕ ಶಾಲೆ ಮಂಜೂರು ಮಾಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಮನವಿ ಮಾಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೀಗ ಪ್ರಧಾನಮಂತ್ರಿ ಕಚೇರಿಯ ಒಪ್ಪಿಗೆಗೆ ಕಾಯುತ್ತಿದ್ದೇವೆ’ ಎಂದು ಹೇಳಿದರು.

‘ದೇಶ ಸ್ವಾತಂತ್ರ್ಯ ಪಡೆದ ಆರಂಭದಲ್ಲೇ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಇದರಿಂದಾಗಿ ಉತ್ಪಾದನಾ ವಲಯದಲ್ಲಿ ಪ್ರಗತಿ ಕಾಣಲಿಲ್ಲ. ಸಾರಿಗೆ ಸಂಪರ್ಕದ ಕೊರತೆಯಿಂದಾಗಿಯೇ ಉತ್ಪಾದನೆ ವಲಯ ಹಿನ್ನಡೆ ಅನುಭವಿಸಬೇಕಾಯಿತು’ ಎಂದು ಹೇಳಿದರು.

‘2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ₹ 25 ಲಕ್ಷ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಂಪರ್ಕದಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ’ ಎಂದು ತಿಳಿಸಿದರು.

‘ಮುಂಬೈಗೆ ಹೋಗಲು ಮೊದಲು 30 ತಾಸು ಬೇಕಾಗುತ್ತಿತ್ತು. ಇದೀಗ 12 ತಾಸುಗಳಲ್ಲಿ ಮುಂಬೈ ತಲುಪುತ್ತಿದ್ದೇವೆ. ಹೆದ್ದಾರಿಗಳ ನಿರ್ಮಾಣದಿಂದ ನೆರೆಯ ತೆಲಂಗಾಣ ರಾಜ್ಯಕ್ಕೂ ಅನುಕೂಲವಾಗಿದೆ. ಬೀದರ್‌–ಕಮಲನಗರ ಹೆದ್ದಾರಿ ನಿರ್ಮಾಣವಾದ ಮೇಲೆ ಕೇವಲ 35 ನಿಮಿಷದಲ್ಲೇ ದೂರವನ್ನು ಕ್ರಮಿಸುತ್ತಿದ್ದೇವೆ’ ಎಂದು ಹೇಳಿದರು.

‘ಕೆಲ ರಾಜಕಾರಣಿಗಳು ಹಿಂದಿನ ರಸ್ತೆಗಳೇ ಚೆನ್ನಾಗಿ ಇದ್ದವು ಎಂದು ಹೇಳುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ಕೊಡುತ್ತಿದ್ದೇವೆ’ ಎಂದು ಟೀಕಿಸುವ ಶಾಸಕರನ್ನು ಮೊನಚಾದ ಮಾತಿನಿಂದ ಚುಚ್ಚಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಂ ಖಾನ್‌ ಮಾತನಾಡಿ, ‘ಕೇಂದ್ರ ಸಚಿವರೊಂದಿಗೆ ಸ್ಪೋಟ್ಸ್ ಕಾರ್‌ನಲ್ಲಿ ಹೊಸ ಹೆದ್ದಾರಿ ಮೇಲೆ ಸಂಚರಿಸುತ್ತಿದ್ದೇನೆ. ಅಂತರ ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚರಿಸಿದ ಭಾಸವಾಗಿದೆ. ನಾನು ನಾಲ್ಕು ವರ್ಷಗಳ ಹಿಂದೆ ದುಬೈಗೆ ಹೋಗಿದ್ದೆ. ಅಂತಹ ಅನುಭವ ನನಗೆ ಆಗಿದೆ’ ಎಂದು ತಿಳಿಸಿದರು.

‘₹ 58 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಬೈಪಾಸ್‌ ರಸ್ತೆ ನಿರ್ಮಾಣದಿಂದ ಸಂಚಾರ ಒತ್ತಡ ಕಡಿಮೆಯಾಗಿದೆ. ಕೇಂದ್ರ ಸಚಿವರು ಬೀದರ್‌ನಿಂದ ಅನೇಕ ರೈಲುಗಳು ಸಂಚರಿಸುವಂತೆ ಮಾಡಿದ್ದಾರೆ. ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‌ ಅವರ ಕೊಡುಗೆಯನ್ನೂ ಮರೆಯಲಾಗದು’ ಎಂದು ಹೇಳಿದರು.

‘ಅಭಿವೃದ್ಧಿ ವಿಷಯದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ. ಒಳ್ಳೆಯ ಕಾರ್ಯ ಜತೆಗೂಡಿ ಮಾಡಿದ್ದೇನೆ. ಜನರಿಗೆ ಒಳ್ಖೆಯ ಸೇವೆ ಕೊಡುವುದೇ ನನ್ನ ಗುರಿಯಾಗಿದೆ. ಚುನಾಯಿತ ಪ್ರತಿನಿಧಿಗಳಲ್ಲದಿದ್ದರೂ ಕೆಲವರು ನಾನೇ ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂಥವರು ಸಚಿವರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದರು.

‘ರಿಂಗ್‌ ರಸ್ತೆಯನ್ನು ಭಾಲ್ಕಿ ರಸ್ತೆಯಿಂದ ಅಲಿಯಾಬಾದ್‌ ಮೂಲಕ ಚಿಕ್ಕಪೇಟೆ ವರೆಗೆ ಜೋಡಿಸಿದರೆ ಅನುಕೂಲವಾಗಲಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಪ್ರಯತ್ನಿಸಬೇಕಿದೆ’ ಎಂದರು.

ರಾಜ್ಯ ಹಜ್‌ ಕಮಿಟಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಗುತ್ತಿಗೆದಾರ ಜಗದೀಶ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬಿಜೆಪಿ ಹಿರಿಯ ಮುಖಂಡ ಗುರುನಾಥ ಕೊಳ್ಳೂರ ಸ್ವಾಗತಿಸಿದರು. ಬುಡಾ ಅಧ್ಯಕ್ಷ ಬಾಬು ವಾಲಿ ನಿರೂಪಿಸಿದರು. ಕೊಳ್ಳೂರ ಗುರುನಾಥ ಕನ್‍ಸ್ಟ್ರಕ್ಷನ್ಸ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್(ಕೆಜಿಸಿಐಪಿಎಲ್) ಸಿಎಂಡಿ ಸಚಿನ್ ಕೊಳ್ಳೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT