ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ‘ಹೈನು ಹೊನ್ನು’ ಅಭಿವೃದ್ಧಿಗೆ ರೆಕ್ಕೆ

ಬಹುದಿನಗಳ ಕನಸು ನನಸು ಮಾಡಲು ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ
Last Updated 26 ನವೆಂಬರ್ 2022, 4:56 IST
ಅಕ್ಷರ ಗಾತ್ರ

ಜನವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹೈನುಗಾರಿಕೆ ಅಭಿವೃದ್ಧಿಗೆ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ಕಾರಣ ಜಿಲ್ಲೆಯಲ್ಲಿ ಹಾಲಿನ ಹೊಳೆ ಹರಿಯುವ ಆಸೆ ಚಿಗುರೊಡೆದಿದೆ.

ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಹಾಲು ಸಂಗ್ರಹ ಆಗುತ್ತಿರುವುದು ಜಿಲ್ಲೆಯಲ್ಲಿ. ಹೀಗಾಗಿ ಇಲ್ಲಿ ಕೋಲಾರ ಮಾದರಿಯಲ್ಲಿ ಹೈನುಗಾರಿಕೆ ಅಭಿವೃದ್ಧಿಪಡಿಸುವುದು ಹಾಗೂ ಹಾಲಿನ ಹೊಳೆ ಹರಿಸುವುದು ಅಸಾಧ್ಯವೇನೂ ಅಲ್ಲ.

ಜಿಲ್ಲೆಯಲ್ಲಿ ಹೈನುಗಾರಿಕೆಗೆ ವಿಪುಲ ಅವಕಾಶಗಳಿವೆ. ಪೂರಕ ವಾತಾವರಣ ಕಲ್ಪಿಸಿದರೆ ಕ್ಷೀರ ಕ್ರಾಂತಿಯೇ ಆಗಲಿದೆ. ಇದನ್ನು ಮನಗಂಡಿರುವ ಧರ್ಮಸ್ಥಳ ಸಂಸ್ಥೆಯು ಮೂರು ವರ್ಷಗಳ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಅಣಿಯಾಗಿದೆ.

ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟವು ಸದ್ಯ ಜಿಲ್ಲೆಯಲ್ಲಿ ಪ್ರತಿ ದಿನ 26 ಸಾವಿರ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಮೂರು ವರ್ಷಗಳಲ್ಲಿ ನಿತ್ಯದ ಹಾಲು ಉತ್ಪಾದನೆ 1.5 ಲಕ್ಷ ಲೀಟರ್‌ಗೆ ಹೆಚ್ಚಿಸಲು ಕರ್ನಾಟಕ ಹಾಲು ಮಹಾ ಮಂಡಲಕ್ಕೆ ನೆರವಾಗುವುದು ಧರ್ಮಸ್ಥಳ ಸಂಸ್ಥೆಯ ಗುರಿಯಾಗಿದೆ.

ಇದಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಂಸದರ ನಿಧಿ ಹಾಗೂ ಸಂಸ್ಥೆಯಿಂದ ವರ್ಷಕ್ಕೆ ತಲಾ ₹7 ಕೋಟಿಯಂತೆ ಒಟ್ಟು ₹21 ಕೋಟಿ ವಿನಿಯೋಗಿಸಲು ಮುಂದಾಗಿದೆ. ಹೈನು ಗಾರಿಕೆ ಜಾಗೃತಿ, ಹಸುಗಳ ಉಚಿತ ವಿತರಣೆ ಮೊದಲಾದ ಯೋಜನೆಗಳು ಇದರಲ್ಲಿ ಸೇರಿವೆ.

ಹೈನುಗಾರಿಕೆ ನಿತ್ಯ ಆದಾಯ ತಂದುಕೊಡುವ ಉಪ ಕಸುಬು ಆಗಿದೆ. ಜಿಲ್ಲೆಯ ಬಹಳಷ್ಟು ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಪಶುಪಾಲನೆಯಲ್ಲಿ ತೊಡಗಿಸಿಕೊಂಡ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ ಎಂದು ಭಾಲ್ಕಿ ತಾಲ್ಲೂಕಿನ ಕಟ್ಟಿ ತೂಗಾಂವ್ ಸಮೀಪದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರದ (ದೇವಣಿ) ಮುಖ್ಯಸ್ಥ ಡಾ. ಪ್ರಕಾಶಕುಮಾರ ರಾಠೋಡ್ ತಿಳಿಸುತ್ತಾರೆ.

ಉತ್ತಮ ಹೈನು ತಳಿಗಳ ಆಯ್ಕೆ, ವೈಜ್ಞಾನಿಕ ನಿರ್ವಹಣೆ, ಸಮತೋಲನ ಆಹಾರ ಪೂರೈಕೆ, ದನಗಳ ಆರೋಗ್ಯ ರಕ್ಷಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳು ಹೈನುಗಾರಿಕೆಯನ್ನು ಲಾಭದಾಯಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT