ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ

ಸೋಮವಾರ, ಮೇ 27, 2019
27 °C
ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರ ವಾಗ್ದಾಳಿ

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ

Published:
Updated:
Prajavani

ಬೀದರ್‌: ‘ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ಕಾದಿದೆ. ಅವರು ಮತ್ತೆ ಅಧಿಕಾರಕ್ಕೆ ಬರದಂತೆ ಮತದಾರರು ವಿಶೇಷವಾಗಿ ಅಹಿಂದ ಸಮುದಾಯದವರು ಎಚ್ಚರಿಕೆ ವಹಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಅನಿಲಕುಮಾರ ಬೆಲ್ದಾರ ಹಾಗೂ ರಮೇಶ ಡಾಕುಳಗಿ ಹೇಳಿದರು.

‘ದೇಶದಲ್ಲಿ ಜಾತ್ಯತೀತ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಲು ಈ ಬಾರಿ ದಲಿತ ಸಂಘಟನೆಗಳು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ಅಭ್ಯರ್ಥಿಯನ್ನು ಬೆಂಬಲಿಸಲಿವೆ’ ಎಂದು ನಗರದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕೋಮುವಾದಿ ಶಕ್ತಿಯನ್ನು ವಿರೋಧಿಸಲು ಜಿಲ್ಲೆಯ 15 ದಲಿತ ಸಂಘಟನೆಗಳು ಒಕ್ಕೂಟ ರಚಿಸಿಕೊಂಡಿವೆ. ಒಟ್ಟು ನಾಲ್ಕು ಸಾವಿರ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿಯ ಪರ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಗಂಡಾಂತರದಲ್ಲಿ ಇದೆ. ಸಂಸತ್ತಿಗೆ ಪ್ರವೇಶ ಮಾಡುವ ಮೊದಲು ಹಣೆ ಹಚ್ಚಿ ತಲೆ ಬಾಗಿ ಪ್ರವೇಶಿಸಿದ್ದ ಮೋದಿ ಅವರು ಇದೀಗ ಸಂಸದದೀಯ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಕೇಂದ್ರ ಸಚಿವರು ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೂ ಮೋದಿ ಮೌನವಾಗಿದ್ದಾರೆ. ಹೀಗಾಗಿ ಮೋದಿ ಅವರೇ ಸಂವಿಧಾನ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗಳೇ ಇರಬಾರದು ಎನ್ನುವ ವ್ಯಕ್ತಿಗೆ ಬಿಜೆಪಿಯು ಬೆಂಗಳೂರು ಸೆಂಟ್ರೆಲ್‌ ಕ್ಷೇತ್ರದ ಟಿಕೆಟ್‌ ನೀಡಿ ಚುನಾವಣಾ ಕಣಕ್ಕೆ ಇಳಿಸಿದೆ. ಅಷ್ಟೇ ಅಲ್ಲ ಕೇಂದ್ರದ ಸ್ವಾಯುತ್ತ ಸಂಸ್ಥೆಗಳ ಮೇಲೆ ಮೋದಿ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಪಾರದರ್ಶಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ದೇಶದಲ್ಲಿ ಅಭದ್ರತೆ ಕಾಡುತ್ತಿದೆ’ ಎಂದು ಆರೋಪ ಮಾಡಿದರು.

‘ಈಚೆಗೆ ಬಿಜೆಪಿಗೆ ಸೇರಿರುವ ನಿವೃತ್ತ ಐಎಎಸ್‌ ಅಧಿಕಾರಿ ಕೆ.ರತ್ನಪ್ರಭ ನಿಜವಾದ ದಲಿತಳಲ್ಲ. ರತ್ನಪ್ರಭ ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರೇ ಶಿಫಾರಸು ಮಾಡಿದ್ದರು. ಆದರೆ, ರತ್ನಪ್ರಭ ಈಗ ತಿರುಗಿ ಬಿದ್ದಿದ್ದಾರೆ. ದಲಿತ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ಆಂಧ್ರಪ್ರದೇಶದ ಮೂಲದವರು ಇಲ್ಲಿ ಎಸಿ, ಡಿಸಿಯಾಗಿದ್ದ ಮಾತ್ರಕ್ಕೆ ಮತದಾರರು ಅವರ ಮಾತು ಕೇಳುವುದಿಲ್ಲ’ ಎಂದು ಕಟುಕಿದರು.

‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 2.75 ಲಕ್ಷ ದಲಿತ ಮತದಾರರು ಇದ್ದರು. ಪ್ರಸ್ತುತ 7 ಲಕ್ಷ ದಲಿತರು ಹಾಗೂ 4 ಲಕ್ಷ ಮುಸ್ಲಿಂ ಮುತದಾರರು ಇದ್ದಾರೆ. ಒಟ್ಟು ಶೇಕಡ 68 ರಷ್ಟು ಅಹಿಂದ ಮತಗಳು ಇವೆ. ಎಲ್ಲರೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ ಫಲಿತಾಂಶ ಕಾಂಗ್ರೆಸ್‌ ಪರವಾಗಿ ಇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಿರುವವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ದೇಶದ ಭವಿಷ್ಯದ ಬಗ್ಗೆ ಚಿಂತೆಯೂ ಇಲ್ಲ. ಪ್ರಗತಿಪರ ವಿಚಾರಧಾರೆಯನ್ನು ಹೊಂದಿರುವ ಆಭ್ಯರ್ಥಿಯ ಪರವಾಗಿ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವುದು’ ಎಂದು ತಿಳಿಸಿದರು.

ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಬಾಬುರಾವ್‌ ಪಾಸ್ವಾನ್, ಕಲ್ಯಾಣರಾವ್ ಭೋಸಲೆ, ರಾಜಕುಮಾರ ಬನ್ನೇರ್, ರಘುನಾಥ ಗಾಯಕವಾಡ, ಶಿವಕುಮಾರ ನೀಲಿಕಟ್ಟಿ, ಅರುಣ ಕುದುರೆ, ಓಪ್ರಕಾಶ ಭಾವಿಕಟ್ಟಿ, ಅಂಬಾದಾಸ ಗಾಯಕವಾಡ, ಶಾಲಿವಾನ ಬಡಿಗೇರ, ಎಂ.ಪಿ.ಮುದಾಳೆ, ಅಂಬರೀಷ್, ಮಹೇಶ ಕೊರ್ತಿ, ಅವಿನಾಶ ದಿನೆ, ತುಕಾರಾಮ ಕುದರೆ, ಭರತನಾಗ ಕಾಂಬಳೆ, ಮಹೇಶ ಗೊರನಾಳಕರ್, ಸುಬ್ಬಣ್ಣ ಕರಕನಾಳ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !