ಸೋಮವಾರ, ಏಪ್ರಿಲ್ 26, 2021
31 °C
ಇನ್ನೊಂದು ಆಕ್ಸಿಜನ್‌ ಟ್ಯಾಂಕ್‌ ನಿರ್ಮಾಣಕ್ಕೆ ಮುಂದಾದ ಜಿಲ್ಲಾಡಳಿತ; 24 ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ

ಕೋವಿಡ್‌ ನಿಯಂತ್ರಣಕ್ಕೆ ಹಗಲು ರಾತ್ರಿ ಪರಿಶ್ರಮ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್‌ ಎರಡನೇ ಅಲೆ ಜನರನ್ನು ಭಯಭೀತಗೊಳಿಸಿದೆ. ಸ್ವಲ್ಪ ಜ್ವರ, ಕೆಮ್ಮು ಬಂದರೂ ಜನ ಕೋವಿಡ್‌ ಲಕ್ಷಣ ಎಂದೇ ಭಾವಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಸೋಂಕಿತರ ಸಂಖ್ಯೆ ಹೆಚ್ಚಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲೂ ದೊರೆಯುತ್ತಿರುವ ಕಾರಣ ಜನ ಕೋವಿಡ್‌ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಈಗಾಗಲೇ ನಗರದ ಕೋವಿಡ್‌ ಆಸ್ಪತ್ರೆ ಬೆಡ್‌ಗಳು ಭರ್ತಿಯಾಗಿವೆ. ಹೀಗಾಗಿ ಜಿಲ್ಲಾಡಳಿತ ಸಾರ್ವಜನಿಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ನಗರದಲ್ಲಿ ಮೂರು ಕಡೆ ಕೋವಿಡ್‌ ಆಸ್ಪತ್ರೆ ತೆರೆದಿದೆ. ಶಾಹೀನ್‌ ಶಿಕ್ಷಣ ಸಂಸ್ಥೆ ಸಹ ಜಿಲ್ಲಾಡಳಿತಕ್ಕೆ ಕೈಜೋಡಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಜನ ಸಾಮಾನ್ಯರು ಹಾಗೂ ಬಡವರಿಗೆ ಚಿಕಿತ್ಸೆ ಸಿಗುತ್ತಿದೆ. ಜನ ಜಿಲ್ಲಾಡಳಿತದ ಮೇಲೆ ವಿಶ್ವಾಸ ಇಟ್ಟು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಹುಮನಾಬಾದ್‌ ಹಾಗೂ ಔರಾದ್‌ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸಾ ಕೇಂದ್ರ ಆರಂಭಿಸಿರುವುದರಿಂದ ಅಲ್ಲಿಯ ಜನರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ದೊರೆಯಲಾರಂಭಿಸಿದೆ.

‘ಜಿಲ್ಲೆಗೆ ನೆರೆಯ ರಾಜ್ಯಗಳಿಂದ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ರೋಗ‌ ಲಕ್ಷಣ ಇದ್ದ 20 ಜನರ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 6 ಜನರಿಗೆ ಕೋವಿಡ್ ದೃಢಪಟ್ಟಿದೆ. ಹೊರ ರಾಜ್ಯದಿಂದ ಬಂದವರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಮನೆಯಲ್ಲೇ ಸುರಕ್ಷಿತ ಕ್ವಾರಂಟೈನ್‌ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು‌ ಡಾ.ಅನಿಲ ಗಡ್ಡೆ ಹೇಳುತ್ತಾರೆ.

24 ಕೋವಿಡ್‌ ಆಸ್ಪತ್ರೆಗಳು

ಬೀದರ್‌ನಲ್ಲಿ ಬ್ರಿಮ್ಸ್‌ ಕೋವಿಡ್‌ ಆಸ್ಪತ್ರೆ, ನಾಲ್ಕು ತಾಲ್ಲೂಕು ಆಸ್ಪತ್ರೆ, ಎಂಟು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಒಂದು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ ಒಟ್ಟು 14 ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 10 ಖಾಸಗಿ ಕೋವಿಡ್‌ ಹೆಲ್ತ್‌ ಸೆಂಟರ್ ಹಾಗೂ ಆರು ಕೋವಿಡ್‌ ಕೇರ್‌ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ.

‘ಜಿಲ್ಲೆಯಲ್ಲಿ 1,300 ಬೆಡ್‌ ಹಾಗೂ 110 ವೆಂಟಿಲೇಟರ್‌ಗಳಿವೆ. ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾದ ನಂತರ ರೆಮ್‌ಡಿಸಿವಿರ್ ಇಂಜಕ್ಷನ್‌ಗೆ ಬೇಡಿಕೆ ಏರಿದೆ. ಪ್ರಸ್ತುತ ರೆಮ್‌ಡಿಸಿವಿರ್ ಕೊರತೆ ಇಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ಕೋವಿಡ್ ಪರೀಕ್ಷಾ ಉಪಕರಣಗಳು ಇವೆ. ನಿತ್ಯ 4 ಸಾವಿರ ಜನರ ಗಂಟಲು, ಮೂಗು ದ್ರವದ ಮಾದರಿ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ಗರಿಷ್ಠಸಂಖ್ಯೆಯಲ್ಲಿ ‍ಪರೀಕ್ಷೆ ನಡೆದಿರುವ ಕಾರಣ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಆರೋಗ್ಯ ಇಲಾಖೆ ಕೋವಿಡ್‌ ಲಸಿಕಾ ಅಭಿಯಾನ ಆರಂಭಿಸಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ಕೊಡುತ್ತಿದೆ. ಮೇ 1ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕೋವಿಡ್‌ ಲಕ್ಷಣ ರಹಿತ ಹಾಗೂ ಕಡಿಮೆ ಕೋವಿಡ್‌ ಲಕ್ಷಣವಿರುವ ಸೋಂಕಿತರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಸೋಂಕು ಹರಡದಂತೆ ಹಾಗೂ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಆಗದಂತೆ ನಿಗಾವಹಿಸಲಾಗುತ್ತಿದೆ.

ಹಳ್ಳಿಗಳಲ್ಲಿ ಕೋವಿಡ್‌ ಸೈನಿಕರು:

ಗ್ರಾಮ ಮಟ್ಟದಲ್ಲಿ ಕೋವಿಡ್‌ ಸಮುದಾಯಕ್ಕೆ ಹರಡಿದರೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಹೀಗಾಗಿ ಜಿಲ್ಲಾಡಳಿತ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಲು ಕ್ರಮಕೈಗೊಂಡಿದೆ.

ಹಳ್ಳಿಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಮದುವೆ, ಜಾತ್ರೆ, ಮೆರವಣಿಗೆ, ಸಂತೆ, ಧಾರ್ಮಿಕ ಹಾಗೂ ಇತರ ಗುಂಪು ಸೇರುವ ಪ್ರದೇಶದ ಮೇಲೆ ನಿಗಾ ಇಟ್ಟು ಸೋಂಕು ಹರಡುವಿಕೆ ತಡೆಗೆ ಅವರಿಗೆ ಮನವರಿಕೆ ಮಾಡಬೇಕು ಎಂದು ಈಗಾಲೇ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಕಾರ್ಯಪಡೆಗೆ ಮನವಿ ಮಾಡಿದ್ದಾರೆ.

‘ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ನಿಯಮ ಪಾಲನೆಯಾಗುತ್ತಿಲ್ಲ. ದಿನಸಿ, ಹಾಲಿನ ಅಂಗಡಿ, ನ್ಯಾಯಬೆಲೆ ಅಂಗಡಿ, ಬ್ಯಾಂಕ್, ಎಟಿಎಂ, ಅರಳಿಕಟ್ಟೆ, ಧಾರ್ಮಿಕ ಸ್ಥಳ, ಔಷಧ ಅಂಗಡಿಗಳಲ್ಲಿವ್ಯಕ್ತಿಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ. ನಿಯಮ ಪಾಲಿಸುವ ಅಂಗಡಿಗಳಿಗೆ ಮಾತ್ರ ತೆರೆದಿಡಲು ಅವಕಾಶ ನೀಡಬೇಕು’ ಎಂದು ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

‘ಹಳ್ಳಿಗಳಲ್ಲಿ ಜನ ಗುಂಪು ಸೇರುವುದನ್ನು ತಡೆಯಲು ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸೇರಿ ಇಬ್ಬರು ಸ್ಮಾರ್ಟ್‍ಫೋನ್ ಹೊಂದಿರುವ 18ರಿಂದ 35 ವರ್ಷದ ಒಳಗಿನ ಗ್ರಾಮಗಳಲ್ಲಿನ ಯುವಕ, ಯುವತಿಯರನ್ನು ಕೋವಿಡ್ ಸೈನಿಕರಾಗಿ ನೇಮಕ ಮಾಡಿ ಸೇವೆ ಪಡೆಯವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸುತ್ತಾರೆ.

ಏಳು ಚೆಕ್‌ಪೋಸ್ಟ್‌

ಬೀದರ್‌: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ ನಂತರ ಜಿಲ್ಲೆಯ ಗಡಿಯಲ್ಲಿ ಒಟ್ಟು ಏಳು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ, ಕಮಲನಗರ ತಾಲ್ಲೂಕಿನ ಚಿಕಲಿ, ಔರಾದ್‌ ತಾಲ್ಲೂಕಿನ ವನಮಾರಪಳ್ಳಿ ಸೇರಿ ಒಟ್ಟು 7 ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಹಾರಾಷ್ಟ್ರದಿಂದ ಬರುವ ಪ್ರತಿ ವಾಹನ ತಡೆದು ತಪಾಸಣೆ ನಡೆಸಲಾಗುತ್ತಿದೆ. ಸ್ಥಳದಲ್ಲೇ
ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಜ್ವರ ತಪಾಸಣೆ ಮಾಡಿ ಜ್ವರ ಕಂಡು ಬಂದರೆ ವಾಪಸ್‌ ಕಳಿಸುವ ಪ್ರಕ್ರಿಯೆ ಮುಂದುವರಿದಿದೆ.

ಆಕ್ಸಿಜನ್‌ ಕೊರತೆ ಇಲ್ಲ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಇಲ್ಲ. ಆದರೆ, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಹಣ ನೀಡಿ ಆಕ್ಸಿಜನ್‌ ಖರೀದಿಸುತ್ತಿರುವ ದೂರಗಳು
ಕೇಳಿಬಂದ ನಂತರ ಆಕ್ಸಿಜನ್‌ ಉತ್ಪಾದನಾ ಕೇಂದ್ರಗಳಿಂದ ಪೊಲೀಸ್‌ ಬೆಂಗಾವಲಿನಲ್ಲಿ ಜಿಲ್ಲೆಗೆ ಆಕ್ಸಿಜನ್‌ ಟ್ಯಾಂಕ್‌ ತರಲಾಗುತ್ತಿದೆ.

ನಗರದ ಬ್ರಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ 14 ಕಿಲೋ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದೆ. ತೀವ್ರ ನಿಗಾ ಘಟಕದಲ್ಲಿ 100 ರೋಗಿಗಳು ಇದ್ದಾರೆ. ನಿತ್ಯ 8 ಕಿಲೋ ಲೀಟರ್ ಆಕ್ಸಿಜನ್
ಬಳಕೆಯಾಗುತ್ತಿದೆ. 2 ಕಿಲೋ ಲೀಟರ್ ಆಕ್ಸಿಜನ್ ಖಾಸಗಿ ಆಸ್ಪತ್ರೆಗಳಲ್ಲಿ ಉಪಯೋಗಿ ಸಲಾಗುತ್ತಿದೆ. ಬ್ರಿಮ್ಸ್‌ ಆಸ್ಪತ್ರೆಯ ಆವರಣ ದಲ್ಲಿಯೇ ಇನ್ನೊಂದು ಆಕ್ಸಿಜನ್‌ ಟ್ಯಾಂಕ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಬೀದರ್‌ ಜಿಲ್ಲೆಗೆ ಒಂದು ದಿನ ಕರ್ನಾಟಕ ಗ್ಯಾಸ್ ಏಜೆನ್ಸಿ, ಇನ್ನೊಂದು ದಿನ ಪ್ರ್ಯಾಕ್ಸ್ ಏರ್ ಏಜೆನ್ಸಿ ಆಕ್ಸಿಜನ್
ಸರಬರಾಜು ಮಾಡುತ್ತಿದೆ. ಇದನ್ನು ಹೊರತು ಪಡಿಸಿ ತುರ್ತು ಸಂದರ್ಭದಲ್ಲಿ ಹೈದರಾಬಾದ್‌ನಿಂದಲೂ ಆಕ್ಸಿಜನ್‌ ತರಿಸಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ.

‘ಆಕ್ಸಿಜನ್‌ ಬೇಡಿಕೆ ಹೆಚ್ಚುತ್ತಲೇ ಇರುವ ಕಾರಣ ಕೈಗಾರಿಕೆಗಳು ಬಳಸುತ್ತಿರುವ ಜಂಬೊ ಹಾಗೂ ಸಣ್ಣ ಸಿಲಿಂಡರ್‌ಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಕೊಡುವಂತೆ ಮನವಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ.

ಅಂತ್ಯ ಸಂಸ್ಕಾರದಲ್ಲಿ ಐವರಿಗೆ ಮಾತ್ರ ಅವಕಾಶ

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಐವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಮೊದಲು 20 ಜನರಿಗೆ ಅವಕಾಶ ನೀಡಿತ್ತು. ಭಾನುವಾರ ಪರಿಷ್ಕೃತ ಆದೇಶ ಹೊರಡಿಸಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಸೀಮಿತಗೊಳಿಸಿದೆ.

‘ಮೃತಪಟ್ಟ ವ್ಯಕ್ತಿಯಲ್ಲಿ ಕೋವಿಡ್‌ ಸೋಂಕು ದ್ವಿಗುಣಗೊಂಡು ಕ್ಷಿಪ್ರಗತಿಯಲ್ಲಿ ಹರಡುತ್ತಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಒಳ್ಳೆಯದು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಸಲಹೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು