ಶನಿವಾರ, ಸೆಪ್ಟೆಂಬರ್ 21, 2019
21 °C
ಲೋಕಸಭಾ ಚುನಾವಣೆ

ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರ ಸಭೆ: ನಿಯಮ ಪಾಲಿಸಲು ಚುನಾವಣಾಧಿಕಾರಿ ಸೂಚನೆ

Published:
Updated:
Prajavani

ಬೀದರ್‌: ‘ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಮೇ 23ರಂದು ನಗರದ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಚ್.ಆರ್.ಮಹಾದೇವ ಸೂಚಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣಾ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮತ ಎಣಿಕೆ ಏಜೆಂಟರು 7.45 ರೊಳಗಾಗಿ ಕೇಂದ್ರಕ್ಕೆ ಬರಬೇಕು. ಇವಿಎಂ ಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಯ ಬಾಗಿಲು ತೆರೆಯುವ ವೇಳೆ ಅಭ್ಯರ್ಥಿ ಅಥವಾ ಅವರು ನೇಮಿಸಿರುವ ಒಬ್ಬರು ಹಾಜರಿರಬೇಕು’ ಎಂದು ಹೇಳಿದರು.

‘ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಹಾಗೂ ಇತರ ವಸ್ತುಗಳನ್ನು ತರಬಾರದು. ಮತ ಎಣಿಕೆ ಸಂದರ್ಭದಲ್ಲಿ ಆಕ್ಷೇಪಗಳು ವ್ಯಕ್ತವಾದರೆ ಶಾಂತತೆಯಿಂದ ಸಹಾಯಕ ಚುನಾವಣಾಧಿಕಾರಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಯಾವುದೇ ರೀತಿಯ ಗದ್ದಲ ಹಾಗೂ ಗೊಂದಲಗಳಿಗೆ ಆಸ್ಪದ ನೀಡಬಾರದು’ ಎಂದು ತಿಳಿಸಿದರು.

‘ಮತ ಎಣಿಕೆಯ ಮಾಹಿತಿ ಎಲ್ಲರಿಗೂ ಲಭ್ಯವಾಗುವಂತಾಗಲು ಸುವಿಧಾ ವೆಬ್‌ಪೋರ್ಟ್‌ಲ್‌ನಲ್ಲಿ ಮಾಹಿತಿ ಬಿತ್ತರಿಸಲಾಗುತ್ತಿದೆ. ಕೇಂದ್ರದ ಹೊರಭಾಗದಲ್ಲಿ ಪರದೆ ಅಳವಡಿಸಲಾಗುತ್ತಿದ್ದು, ಧ್ವನಿ ವರ್ಧಕದ ಮೂಲಕವೂ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘ಚುನಾವಣಾ ಅಭ್ಯರ್ಥಿಗಳು ತಮ್ಮ ಮತ ಎಣಿಕೆ ಏಜೆಂಟರ ವಿವರ ಹಾಗೂ ಭಾವಚಿತ್ರಗಳನ್ನು ಮುಂಚಿತವಾಗಿ ಸಹಾಯಕ ಚುನಾವಣಾಧಿಕಾರಿಗೆ ತಲುಪಿಸಿ ಪಾಸ್‌ಗಳನ್ನು ಪಡೆದುಕೊಳ್ಳಬೇಕು’ ಎಂದರು.

ಡಿವೈಎಸ್‌ಪಿ ಎಸ್.ವೈ.ಹುಣಸಿಕಟ್ಟಿ ಮಾತನಾಡಿ, ‘ಮತ ಎಣಿಕೆಯ ಸಂದರ್ಭದಲ್ಲಿ ಕಾನೂನು ಸುವವಸ್ಥೆ ಕಾಪಾಡಲು ಅನುಕೂಲವಾಗುವಂತೆ 250 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರ ಭಾಗದಲ್ಲಿ ಅಗತ್ಯವಿರುವಷ್ಟು ಪೊಲೀಸ್ ಬಂದೋಬಸ್ತ್‌ ಮಾಡಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಡಾ.ಶಂಕರ ವಣಕ್ಯಾಳ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ತಹಶೀಲ್ದಾರರು ಇದ್ದರು.

Post Comments (+)