ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಸ್ಪಷ್ಟನೆ

ಬೀದರ್‌: ನಗರದ ಹೊರವಲಯದಲ್ಲಿ ಡಿ.ಸಿ ಕಚೇರಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ನಗರದ ಹೊರ ವಲಯದ ರೇಷ್ಮೆ ಇಲಾಖೆಯ ಜಾಗದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂರ್ಕೀಣ ನಿರ್ಮಿಸಲಾಗುವುದು. ಇನ್ನು ಪದೇ ಪದೇ ಜಾಗ ಬದಲಿಸಲಾಗದು’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿರ್ವಹಣೆ, ಅತಿವೃಷ್ಟಿ ಪರಿಹಾರ ಕಾರ್ಯ, ಜಿಲ್ಲಾಡಳಿತ ಕಚೇರಿಗಳ ಸಂಕಿರ್ಣ ನಿರ್ಮಾಣ ಕುರಿತು ಪರಾಮರ್ಶಿಸಲು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ರೇಷ್ಮೆ ಇಲಾಖೆಗೆ ಸೇರಿದ 59 ಎಕರೆ ಜಾಗವನ್ನು ರಾಜ್ಯ ಸರ್ಕಾರ ಸಂಕೀರ್ಣಕ್ಕೆ ಮಂಜೂರು ಮಾಡಿದೆ. ಬೀದರ್‌ ನಗರ ವಿಸ್ತರಣೆಗೊಳ್ಳುತ್ತಿದೆ. ಇಲ್ಲಿ ಸಂಕೀರ್ಣ ನಿರ್ಮಿಸಿದರೆ ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳ ಜನತೆಗೂ ಹೋಗಿ ಬರಲು ಅನುಕೂಲವಾಗಲಿದೆ. ಈಗಾಗಲೇ ಕಟ್ಟಡಕ್ಕೆ ಜಾಗ ಅಂತಿಮಗೊಳಿಸುವುದಕ್ಕಾಗಿಯೇ ಹತ್ತು ವರ್ಷ ಕಳೆದಿದ್ದೇವೆ. ಇನ್ನು ವಿಳಂಬ ಮಾಡುವುದು ಬೇಡ’ ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

‘ಈಗಿರುವ ಜಿಲ್ಲಾಧಿಕಾರಿ ಕಚೇರಿಯನ್ನು ನಗರಸಭೆ ಹಾಗೂ ತಹಶೀಲ್ದಾರ್ ಕಚೇರಿಯನ್ನಾಗಿ ಪರಿವರ್ತಿಸಬಹುದು. ಬೀದರ್‌ ತಾಲ್ಲೂಕಿನ ಜನತೆಗೆ ಯಾವುದೇ ರೀತಿಯ ಅನಾನುಕೂಲ ಆಗುವುದಿಲ್ಲ’ ಎಂದು ತಿಳಿಸಿದರು.

ಈಗಿರುವ ಸ್ಥಳದಲ್ಲೇ ಸಂಕೀರ್ಣ ನಿರ್ಮಿಸಿ:
‘ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣವನ್ನು ನೌಬಾದ್ ಸಮೀಪದ ರೇಷ್ಮೆ ಇಲಾಖೆ ಜಾಗದಲ್ಲಿ ಕಟ್ಟಲು ಅವಕಾಶ ಕೊಡುವುದಿಲ್ಲ. ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ನಿರ್ಮಿಸಬೇಕು’ ಎಂದು ಶಾಸಕ ರಹೀಂ ಖಾನ್ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ‘ರೇಷ್ಮೆ ಇಲಾಖೆಯ 55 ಎಕರೆ ಜಾಗ ತೋಟಗಾರಿಕೆ ಕಾಲೇಜಿಗೆ ಮಂಜೂರಾಗಿದೆ. ಹೀಗಾಗಿ ಸ್ಥಳದಲ್ಲಿ ಸಂಕೀರ್ಣ ನಿರ್ಮಿಸಿದರೆ ತೋಟಗಾರಿಕೆ ಕಾಲೇಜಿನ ಪರವಾನಗಿ ರದ್ದಾಗಲಿದೆ. ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳವೇ ಅಂತಿಮಗೊಳಿಸಬೇಕು’ ಎಂದರು.

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ‘ಸಂಕೀರ್ಣಕ್ಕೆ ಈಗಿರುವ ಸ್ಥಳವೇ ಸೂಕ್ತವಾಗಿದೆ. ನಗರಸಭೆ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ತೆರವುಗೊಳಿಸಿದರೆ. ಇಲ್ಲಿ ಉತ್ತಮ ಸಂಕೀರ್ಣ ನಿರ್ಮಿಸಬಹುದು’ ಎಂದು ಸಲಹೆ ನೀಡಿದರು.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಪ್ರಭು ಚವಾಣ್‌ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಮೊದಲು ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ. ವಿಳಂಬ ಮಾಡದೆ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

* * *
ಕಾರಂಜಾ ಸಂತ್ರಸ್ತರಿಗೆ ನೆರವು ನೀಡಿ
‘ಕಾರಂಜಾ ಜಲಾಶಯದ ಹಿನ್ನೀರಿನಿಂದ ಸಂತ್ರಸ್ತರಾಗಿರುವ ರೈತರಿಗೆ ಪರಿಹಾರ ವಿತರಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಒತ್ತಾಯಿಸಿದರು.

‘ಭೂಸ್ವಾಧೀನ ಪಡಿಸಿಕೊಳ್ಳದ ಜಮೀನುಗಳಲ್ಲಿ ನೀರು ನಿಂತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಅಧಿಕಾರ ಅವಧಿಯಲ್ಲಿ ಅವರಿಗೆ ಪರಿಹಾರ ಕೊಡಲು ಸಾಧ್ಯವಾಗಲಿಲ್ಲ. ನಿಮ್ಮ ಅವಧಿಯಲ್ಲಾದರೂ ಪರಿಹಾರ ಕೊಡಲು ಮುಂದಾಗಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.