ಗುರುವಾರ , ಸೆಪ್ಟೆಂಬರ್ 23, 2021
22 °C
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿಕೆ

ಜನರು ಬಯಸುವ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿ :ಸಚಿವ ಪ್ರಭು ಚವಾಣ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಜನರು ಬಯಸುವ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಆದರೆ, ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಅನೇಕ ತಾಂತ್ರಿಕ ಅಡಚಣೆಗಳಿವೆ. ಈ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

‘ಕೊಳಾರ(ಕೆ) ಸಮೀಪ ಹಿಂದೆ ನನ್ನ ಹೆಸರಲ್ಲಿ 3 ಎಕರೆ ಜಮೀನು ಇತ್ತು. ಅದನ್ನು ಸಂಬಂಧಿಗೆ ಕೊಟ್ಟಿದ್ದೇನೆ. ಸಂಕೀರ್ಣ ನಿರ್ಮಿಸುವ ವಿಷಯದಲ್ಲಿ ನನ್ನ ಯಾವುದೇ ಸ್ವಾರ್ಥ ಇಲ್ಲ’ ಎಂದು ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ  ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಕಾರ್ಯ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಿಂದಿನ ಸರ್ಕಾರ ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಸಂಕೀರ್ಣ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

‘2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸಂಕೀರ್ಣಕ್ಕೆ ಹಣ ಮಂಜೂರು ಮಾಡಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಇಂದಿಗೂ ಕಟ್ಟಡ ನಿರ್ಮಾಣವಾಗಿಲ್ಲ. ಈ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.

‘ಕೊಳಾರ(ಕೆ)ದ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದ ಸಮೀಪ ಸಾಕಷ್ಟು ಜಾಗ ಇದೆ. ಅಲ್ಲಿ ಸಂಕೀರ್ಣ ನಿರ್ಮಿಸಿದರೆ ಬಸವಕಲ್ಯಾಣ, ಹುಮನಾಬಾದ್‌, ಚಿಟಗುಪ್ಪ ಸೇರಿದಂತೆ ಎಲ್ಲ ತಾಲ್ಲೂಕಿನ ಜನರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

‘ಬೀದರ್‌ ನಗರ 10 ವರ್ಷಗಳಲ್ಲಿ ಸಾಕಷ್ಟು ವಿಸ್ತರಿಸಿದೆ. ಕೇಂದ್ರ ಬಸ್‌ ನಿಲ್ದಾಣವೂ ಮೊದಲು ಊರ ಹೊರಗೆ ಇತ್ತು. ಇದೀಗ ಅದು ಊರು ಒಳಗೆ ಬಂದಿದೆ. ನೌಬಾದ್‌ನಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿಯೇ ಜಾಗ ಇದೆ. ಕೆಲವರು 9 ಕಿ.ಮೀ. ದೂರದಲ್ಲಿದೆ ಎಂದು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ದೂರದೃಷ್ಟಿಯಿಂದ ವಿಚಾರ ಮಾಡಿ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ತಿಳಿಸಿದರು.

‘ಸಂಕೀರ್ಣ, ಜಿಲ್ಲಾ ಪಂಚಾಯಿತಿ ಹೊಸ ಕಟ್ಟಡ ಒಂದೇ ಕಡೆಗೆ ಅದರೆ ಅನುಕೂಲವಾಗಲಿದೆ. ವಿರೋಧ ಪಕ್ಷದಲ್ಲಿರುವ ಕಾರಣಕ್ಕೆ ಅಭಿವೃದ್ಧಿಗೂ ವಿರೋಧ ಮಾಡುವುದು ಸರಿಯಲ್ಲ. ನಗರದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಪಕ್ಷಬೇಧ ಮರೆತು ಸಹಕರಿಸಬೇಕಾಗಿದೆ’ ಎಂದು ಹೇಳಿದರು.

‘ಔರಾದ್‌ ತಾಲ್ಲೂಕಿಗೆ ಕಾರಂಜಾ ಜಲಾಶಯದಿಂದ ಕುಡಿಯುವ ನೀರು ಪೂರೈಸಲು, ಬೀದರ್‌ನಲ್ಲಿ ಕೃಷಿ ಕಾಲೇಜು ಆರಂಭಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು