ಬುಧವಾರ, ಸೆಪ್ಟೆಂಬರ್ 22, 2021
23 °C
ತಹಶೀಲ್ದಾರ್ ಕಚೇರಿಯಲ್ಲಿ ಹೆಚ್ಚಿದ ಭ್ರಷ್ಟಾಚಾರ: ಆರೋಪ

₹ 15 ಲಕ್ಷ ಲಂಚ ಕೇಸ್: ಜಿಲ್ಲಾಧಿಕಾರಿ ರಾಮಚಂದ್ರನ್ ತಹಶೀಲ್ದಾರ್ ಕಚೇರಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ತಹಶೀಲ್ದಾರ್‌ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹಾಗೂ ತಹಶೀಲ್ದಾರ್‌ ಗಂಗಾದೇವಿ ಜಮೀನು ಮ್ಯುಟೇಷನ್‌ ಮಾಡಿಕೊಡಲು ₹ 15 ಲಕ್ಷ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬೆನ್ನಲ್ಲೇ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಗುರುವಾರ ಇಲ್ಲಿಯ ತಹಶೀಲ್ದಾರ್‌ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದರು.

ತಹಶೀಲ್ದಾರ್‌ ಕಚೇರಿಗೆ ಬಂದಿದ್ದ ವೃದ್ಧರು ಹಾಗೂ ಅಂಗವಿಕಲರು ತಮಗೆ ಸಕಾಲಕ್ಕೆ ಪಿಂಚಣಿ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರಿದರು. ತಹಶೀಲ್ದಾರ್‌ ಕಚೇರಿಗೆ ಅಲೆದಾಡಿ ಸಾಕಾಗಿದೆ. ಕಚೇರಿ ಸಿಬ್ಬಂದಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಪಿಂಚಣಿದಾರರ ದೂರು ಆಲಿಸಿದ ಜಿಲ್ಲಾಧಿಕಾರಿ ಎಲ್ಲರಿಗೂ ಉಪ ವಿಭಾಗಾಧಿಕಾರಿ ಕಚೇರಿಗೆ ಬರುವಂತೆ ಸೂಚಿಸಿದರು. ನಂತರ ಎ.ಸಿ. ಕಚೇರಿಯ ತಹಶೀಲ್ದಾರ್ ಶಕೀಲ್ ಅವರೊಂದಿಗೆ ಚರ್ಚಿಸಿದರು. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲು ಸೂಚಿಸಿದರು.

ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲರ ಹಾಗೂ ಇತರ ಪಿಂಚಣಿದಾರರನ್ನು ಎ.ಸಿ.ಕಚೇರಿ ಆವರಣದಲ್ಲೇ
ಮತ್ತೊಮ್ಮೆ ಭೇಟಿ ಮಾಡಿ ಒಂದೊಂದಾಗಿ ಅವರ ಅಹವಾಲು ಆಲಿಸಿದರು. 2021ರ ಫೆಬ್ರುವರಿಯಿಂದ ಜುಲೈ ವರೆಗಿನ ಪಿಂಚಣಿ ನಮ್ಮ ಬ್ಯಾಂಕ್‌ ಖಾತೆಗೆ ಜಮಾ ಆಗಿಲ್ಲ ಎಂದು ಮಹಿಳೆಯರು ದೂರಿದರು.

ಕೆವೈಸಿ ಅಪ್ಡೇಟ್‌ ಮಾಡಲು ದಾಖಲೆಗಳನ್ನು ಕೊಟ್ಟರೂ ಅಪ್‌ಲೋಡ್ ಮಾಡುತ್ತಿಲ್ಲ. ಮಧ್ಯವರ್ತಿಗಳ ಮೂಲಕ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ 3 ಸಾವಿರ ಪಿಂಚಣಿದಾರರಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರ ಆಧಾರ್ ನಂಬರ್, ಮೊಬೈಲ್ ಹೀಗೆ ಅವಶ್ಯಕ ದಾಖಲೆಗಳನ್ನು ಸರಿಪಡಿಸಲಾಗಿದೆ. ಈಗಾಗಲೇ 1,300 ಪಿಂಚಣಿದಾರರಿಂದ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ಮತ್ತು ಅಂಚೆ ಇಲಾಖೆಯ ಪಾಸ್‌ಬುಕ್, ಇಎಂಒ ಮತ್ತು ಪೋಸ್ಟ್‌ಮನ್ ಸ್ಲೀಪ್ ಪಡೆದು ದಾಖಲೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರದಿಂದ ಸಿಗುವ ಪಿಂಚಣಿಯನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಈ ವಿಷಯದಲ್ಲಿ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಶೀಲ್ದಾರ್‌ ಕಚೇರಿಗಳಲ್ಲಿ ಕೆಲಸಗಳು ಆಗುತ್ತಿಲ್ಲ ಎನ್ನುವ ದೂರುಗಳು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಮಚಂದ್ರನ್‌ ಎಚ್ಚರಿಕೆ ನೀಡಿದರು.

ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು