ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ಗೆ ₹ 6.81 ಕೋಟಿ ಲಾಭ

ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿಕೆ
Last Updated 13 ಸೆಪ್ಟೆಂಬರ್ 2019, 15:09 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ 2018–19ನೇ ಸಾಲಿನಲ್ಲಿ ₹ 6.81 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದರು.

ಇಲ್ಲಿಯ ಬ್ಯಾಂಕ್‌ನ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಶುಕ್ರವಾರ ನಡೆದ 97ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಐದು ವರ್ಷಗಳ ಅವಧಿಯಲ್ಲಿ ಷೇರು ಬಂಡವಾಳ ಸಂಗ್ರಹ, ನಿಧಿ, ಠೇವಣಿ, ಹೂಡಿಕೆ, ದುಡಿಯುವ ಬಂಡವಾಳ ಹೀಗೆ ಎಲ್ಲದರಲ್ಲೂ ಬ್ಯಾಂಕ್‌ ದಾಖಲೆಯ ಪ್ರಗತಿ ಸಾಧಿಸಿದೆ’ ಎಂದು ಹೇಳಿದರು.

‘2013 ರಲ್ಲಿ ಬ್ಯಾಂಕ್‌ನ ಷೇರು ಬಂಡವಾಳ ₹ 50.18 ಕೋಟಿ ಆಗಿತ್ತು. 2019 ರಲ್ಲಿ ಈ ಮೊತ್ತ ₹ 112.37 ಕೋಟಿಗೆ ಏರಿದೆ. ಶೇಕಡ 124 ರಷ್ಟು ಹೆಚ್ಚಳ ದಾಖಲಾಗಿದೆ. ನಿಧಿಗಳ ಮೊತ್ತವು ಇದೇ ಅವಧಿಯಲ್ಲಿ ₹ 92 ಕೋಟಿಯಿಂದ ₹ 283 ಕೋಟಿಗೆ ತಲುಪಿದೆ. ಶೇಕಡ 207 ರಷ್ಟು ಹೆಚ್ಚಳ ದಾಖಲಾಗಿದೆ. 2013 ರಲ್ಲಿ ಬ್ಯಾಂಕ್‌ ₹ 791 ಕೋಟಿ ಠೇವಣಿ ಹೊಂದಿತ್ತು. 2019 ರಲ್ಲಿ ಠೇವಣಿಗಳ ಒಟ್ಟು ಮೊತ್ತವು ₹ 1,610 ಕೋಟಿಗೆ ತಲುಪಿದೆ. ಠೇವಣಿಗಳ ಹೆಚ್ಚಳ ಶೇಕಡ 103 ರಷ್ಟಿದೆ’ ಎಂದು ಮಾಹಿತಿ ನೀಡಿದರು.

‘2013 ರಲ್ಲಿ ಬ್ಯಾಂಕ್‌ನ ಹೂಡಿಕೆ ₹ 363 ಕೋಟಿ ಆಗಿತ್ತು. ಇದೀಗ ಹೂಡಿಕೆ ಮೊತ್ತ ₹ 586 ಕೋಟಿಗೆ ತಲುಪಿದೆ. ದುಡಿಯುವ ಬಂಡವಾಳ ₹ 1,511 ಕೋಟಿಯಿಂದ ₹ 2,955 ಕೋಟಿಗೆ ತಲುಪಿದೆ. 2013 ರಲ್ಲಿ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಹೊರ ಬಾಕಿ ಮೊತ್ತ ₹ 36.77 ಕೋಟಿ ಆಗಿತ್ತು. 2019 ಕ್ಕೆ ಈ ಮೊತ್ತ ₹ 189 ಕೋಟಿಗೆ ತಲುಪಿದೆ. 2013 ರಲ್ಲಿ 7,819 ಸಂಘಗಳಿಗೆ ಸಾಲ ನೀಡಲಾಗಿತ್ತು. 2019 ರಲ್ಲಿ 10,499 ಸಂಘಗಳಿಗೆ ಸಾಲ ನೀಡಲಾಗಿದೆ’ ಎಂದು ಹೇಳಿದರು.

‘2018-19 ನೇ ಸಾಲಿನಲ್ಲಿ ಒಟ್ಟು 1,51,818 ರೈತರಿಗೆ ₹ 781 ಕೋಟಿ ಕೆಸಿಸಿ ಸಾಲ ನೀಡಲಾಗಿದೆ. ಇದೇ ಸಾಲಿನಲ್ಲಿ ಹೊಸದಾಗಿ ಸದಸ್ಯತ್ವ ಪಡೆದ ಒಟ್ಟು 8,795 ರೈತರಿಗೆ ₹ 22.78 ಕೋಟಿ ಸಾಲ ನೀಡಲಾಗಿದೆ. 774 ರೈತರಿಗೆ ₹11.88 ಕೋಟಿ ಮಧ್ಯಾವಧಿ ಸಾಲ ವಿತರಿಸಲಾಗಿದೆ’ ಎಂದು ತಿಳಿಸಿದರು.

‘ಮುಂಚೆ ಬೆಳೆ ಸಾಲದ ಸಂಪೂರ್ಣ ಮೊತ್ತವನ್ನು ನಬಾರ್ಡ್, ಅಪೆಕ್ಸ್ ಬ್ಯಾಂಕ್ ನೀಡುತ್ತಿದ್ದವು. 2012-13 ರಿಂದ ಒಟ್ಟು ವಿತರಿಸಲಾದ ಸಾಲದ ಮೊತ್ತದಲ್ಲಿ ಶೇಕಡ 40 ರಷ್ಟನ್ನು ಮಾತ್ರ ನಬಾರ್ಡ್, ಅಪೆಕ್ಸ್ ಬ್ಯಾಂಕ್ ಭರಿಸುತ್ತಿವೆ. ಉಳಿದ ಶೇಕಡ 60 ರಷ್ಟು ಮೊತ್ತವನ್ನು ಬ್ಯಾಂಕ್‌ ತನ್ನ ಮೂಲಗಳಿಂದ ಭರಿಸುತ್ತಿದೆ’ ಎಂದು ಹೇಳಿದರು.

‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಸೌಲಭ್ಯಗಳನ್ನು ರೈತರಿಗೆ ತಲುಪಿಸುವಲ್ಲಿ ಬ್ಯಾಂಕ್‌ ಎಲ್ಲಕ್ಕೂ ಮುಂದಿದೆ’ ಎಂದರು.

ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ, ನಿರ್ದೇಶಕರಾದ ರಾಚಪ್ಪ ಪಾಟೀಲ, ಅಮರಕುಮಾರ ಖಂಡ್ರೆ, ಬಸವರಾಜ ಹೆಬ್ಬಾಳೆ, ವಿಜಯಕುಮಾರ ಪಾಟೀಲ ಗಾದಗಿ, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಸಂಜಯಸಿಂಗ್ ಹಜಾರಿ, ಶರಣಪ್ಪ ಶಿವಪ್ಪ, ಮೊಹಮ್ಮದ್ ಸಲೀಮೊದ್ದಿನ್, ಬಸವರಾಜ ಗೌಣಿ, ಶಿವಶರಣಪ್ಪ ತಗಾರೆ, ಪರಮೇಶ್ವರ ಮುಗಟೆ, ಹಣಮಂತರಾವ್ ಪಾಟೀಲ, ಸಂಗಮೇಶ ಪಾಟೀಲ, ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ, ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಯಡಮಲ್ಲೆ, ಡಿಜಿಎಂ ಸದಾಶಿವ ಪಾಟೀಲ, ಪಂಢರಿರೆಡ್ಡಿ, ರಾಜಕುಮಾರ ಅಣದೂರೆ, ಅನೀಲ ಪಾಟೀಲ ಉಪಸ್ಥಿತರಿದ್ದರು.

ನಾರಾಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶಶಿಕುಮಾರ ಪಾಟೀಲ ಸಂಗಮ, ಝರೆಪ್ಪ ಮಮದಾಪುರೆ, ಪಿಕೆಪಿಎಸ್ ಅಧ್ಯಕ್ಷ, ಉಪಾಧ್ಯಕ್ಷರು ಪಾಲ್ಗೊಂಡಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್ ಕಾರ್ಯಸೂಚಿ ಪಟ್ಟಿ ವಾಚಿಸಿದರು. ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚೆನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಬಸವರಾಜ ಕಲ್ಯಾಣ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT