ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಡಿಸಿಸಿ ಬ್ಯಾಂಕ್‍ಗೆ ₹ 7.77 ಕೋಟಿ ಲಾಭ

ಮಹಾಸಭೆಯಲ್ಲಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿಕೆ
Last Updated 30 ಅಕ್ಟೋಬರ್ 2021, 14:42 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2020-21ನೇ ಸಾಲಿನಲ್ಲಿ ₹ 7.77 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಇಲ್ಲಿಯ ಡಿಸಿಸಿ ಬ್ಯಾಂಕ್‍ನ ಕೇಂದ್ರ ಕಚೇರಿಯಲ್ಲಿ ನಡೆದ ಬ್ಯಾಂಕ್‍ನ 99ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ₹60 ಲಕ್ಷದಷ್ಟು ಏರಿಕೆಯಾಗಿದೆ. ಬ್ಯಾಂಕ್ ₹. 3,590 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಹೂಡಿಕೆಗಳ ಮೊತ್ತ ₹822.54 ಕೋಟಿ ಆಗಿದೆ. ಆಡಿಟ್‍ನಲ್ಲಿ ‘ಎ' ವರ್ಗದಲ್ಲಿದೆ ಎಂದು ತಿಳಿಸಿದರು.

ಕಳೆದ ವರ್ಷ ₹ 857 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಈ ಪೈಕಿ ₹ 840 ಕೋಟಿ ಸಾಲ ವಿತರಿಸಲಾಗಿದೆ. ₹ 20 ಕೋಟಿ ಮಧ್ಯಮಾವಧಿ ಕೃಷಿ ಸಾಲ ಹಾಗೂ ಸ್ವಸಹಾಯ ಗುಂಪುಗಳಿಗೆ ₹ 235 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿಯಲ್ಲಿ 2016 ರಿಂದಲೂ ಬ್ಯಾಂಕ್ ನಿರಂತರವಾಗಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಕಿಸಾನ್ ಕಾರ್ಡ್, ರುಪೆ ಕಾರ್ಡ್ ವಿತರಣೆ ಸೇರಿದಂತೆ ಡಿಜಿಟಲೀಕರಣ ಕಾರ್ಯದಲ್ಲೂ ಮುಂಚೂಣಿಯಲ್ಲಿ ಇದೆ ಎಂದು ತಿಳಿಸಿದರು.

ಹೊಸ ಸದಸ್ಯರಿಗೆ ಪ್ರತಿ ಎಕರೆಗೆ ₹10 ಸಾವಿರದಂತೆ 8 ಎಕರೆ ವರೆಗೆ ಗರಿಷ್ಠ ₹ 80 ಸಾವಿರ ಬೆಳೆ ಸಾಲ ವಿತರಿಸಲು ನಿರ್ಧರಿಸಲಾಗಿದೆ. ಹೊಸದಾಗಿ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೋಂದಣಿ ಮಾಡಲಾಗಿದೆ. ಬೀದರ್‌ನ ಓಲ್ಡ್ ಸಿಟಿ, ಹುಮನಾಬಾದ್‍ನ ಹಳೆಯ ಪಟ್ಟಣ, ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ, ಭಾಲ್ಕಿ ತಾಲ್ಲೂಕಿನ ಕಣಜಿ ಹಾಗೂ ಔರಾದ್‍ನ ಹಳೆಯ ಪಟ್ಟಣ ಸೇರಿ ಜಿಲ್ಲೆಯಲ್ಲಿ ಬ್ಯಾಂಕ್‍ನ ಐದು ಹೊಸ ಶಾಖೆಗಳನ್ನು ಆರಂಭಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಬ್ಯಾಂಕ್ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ. ಮುಂದೆಯೂ ರೈತರು, ಮಹಿಳೆಯರು, ಯುವಜನರು ಸೇರಿದಂತೆ ಸರ್ವರ ಏಳಿಗೆಗೆ ಶ್ರಮಿಸಲಿದೆ ಎಂದು ತಿಳಿಸಿದರು.

ನಿರ್ದೇಶಕರಾದ ಅಮರಕುಮಾರ ಬಿ. ಖಂಡ್ರೆ, ರಾಚಪ್ಪ ಪಾಟೀಲ, ಬಸವರಾಜ ಹೆಬ್ಬಾಳೆ, ವಿಜಯಕುಮಾರ ಎಸ್. ಪಾಟೀಲ ಗಾದಗಿ, ಸಂಗಮೇಶ ಪಾಟೀಲ, ಮಹಮ್ಮದ್ ಸಲಿಮೊದ್ದಿನ್, ಜಗನ್ನಾಥರೆಡ್ಡಿ ಎಖ್ಖೆಳ್ಳಿ, ಪರಮೇಶ್ವರ ಮುಗಟೆ, ಸಂಜಯಸಿಂಗ್ ಹಜಾರಿ, ಶರಣಪ್ಪ ಶಿವಪ್ಪ ಕನ್ನಾಳೆ, ಬಸವರಾಜ ಗೌಣೆ, ಶಿವಶರಣಪ್ಪ ತಗಾರೆ, ಹನುಮಂತರಾವ್ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಜನ್ ಮಲ್ಲಿಕಾರ್ಜುನ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಭೀಮರಾವ್ ಇದ್ದರು.

ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು. ಸಹಾಯಕ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಲ್ಯಾಣಿ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಪಿ. ಯಡಮಲ್ಲೆ ವಂದಿಸಿದರು.

ಉಮಾಕಾಂತ ನಾಗಮಾರಪಳ್ಳಿಗೆ ರಾಜಕೀಯಕ್ಕೆ ಆಹ್ವಾನ
ಬೀದರ್: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಇನ್ನೂ ಹೆಚ್ಚಿನ ಜನಸೇವೆಗಾಗಿ ರಾಜಕೀಯಕ್ಕೆ ಬರಬೇಕು ಎಂದು ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಕಡಗಂಚಿ ಮನವಿ ಮಾಡಿದರು.

ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಶಾಸಕ, ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಹಕಾರ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದರು. ಜಿಲ್ಲೆಯ ಜನರ ಏಳಿಗೆಗೆ ಶ್ರಮಿಸಿದ್ದರು. ಹೀಗಾಗಿ ಉಮಾಕಾಂತ ನಾಗಮಾರಪಳ್ಳಿ ಅವರು ಬರುವ ಚುನಾವಣೆಗಳಲ್ಲಿ ರಾಜಕೀಯ ಕ್ಷೇತ್ರವನ್ನೂ ಪ್ರವೇಶಿಸಬೇಕು ಎನ್ನುವುದು ಬಹಳ ಜನರ ಅಪೇಕ್ಷೆಯಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT