ವಿಳಂಬ ಮಾಡಿದ್ದಲ್ಲಿ ಡಿಸಿ ಕಚೇರಿ ಎದುರು ಧರಣಿ: ಎಚ್ಚರಿಕೆ

ಮಂಗಳವಾರ, ಜೂಲೈ 16, 2019
26 °C
371 (ಜೆ) ಅರ್ಹತಾ ಪ್ರಮಾಣ ಪತ್ರ ನೀಡಲು ನಿರ್ಲಕ್ಷ್ಯ

ವಿಳಂಬ ಮಾಡಿದ್ದಲ್ಲಿ ಡಿಸಿ ಕಚೇರಿ ಎದುರು ಧರಣಿ: ಎಚ್ಚರಿಕೆ

Published:
Updated:
Prajavani

ಬೀದರ್: 371 (ಜೆ) ಅರ್ಹತಾ ಪ್ರಮಾಣ ಪತ್ರ ನೀಡುವಲ್ಲಿ ಇಲ್ಲಿನ ಉಪ ವಿಭಾಗಾಧಿಕಾರಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಅಗತ್ಯವಿಲ್ಲದ ದಾಖಲೆಗಳನ್ನು ಕೇಳುವ ಮೂಲಕ ತೊಂದರೆ ನೀಡುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಬಿ ಖುರೇಶಿ ಆರೋಪಿಸಿದ್ದಾರೆ.

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸದ್ಯ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. ಆದರೆ, ಉಪ ವಿಭಾಗಾಧಿಕಾರಿ ಕಚೇರಿಯಿಂದ 371 (ಜೆ) ಪ್ರಮಾಣ ಪತ್ರ ಸಕಾಲದಲ್ಲಿ ಸಿಗದಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಿದೆ. ಉಪ ವಿಭಾಗಾಧಿಕಾರಿ ಉದ್ದೇಶಪೂರ್ವಕವಾಗಿಯೇ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.

371 (ಜೆ) ಪ್ರಮಾಣ ಪತ್ರ ಪಡೆಯಲು ಯಾವ ಯಾವ ದಾಖಲೆ ಸಲ್ಲಿಸಬೇಕು ಎನ್ನುವುದನ್ನು ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ. ಅದರಂತೆಯೇ ವಿದ್ಯಾರ್ಥಿಗಳು ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಹೀಗಿದ್ದರೂ ಇತರೆ ದಾಖಲೆಗಳನ್ನು ಕೇಳುವ ಮೂಲಕ ತೊಂದರೆ ನೀಡಲಾಗುತ್ತಿದೆ. ಉಪ ವಿಭಾಗಾಧಿಕಾರಿಯ ವರ್ತನೆಯು ವಿದ್ಯಾರ್ಥಿಗಳನ್ನು ಮಾನಸಿಕ ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾಲಕರು ಸೇರಿದ್ದರು. ಎಲ್ಲರೂ 371 (ಜೆ) ಪ್ರಮಾಣಪತ್ರಕ್ಕಾಗಿಯೇ ಬಂದಿದ್ದರು. ಅನಗತ್ಯ ದಾಖಲೆ ಕೇಳುತ್ತಿರುವ ಬಗ್ಗೆ ಪಾಲಕರು ದೂರಿದ್ದಾರೆ ಎಂದು ಆಪಾದಿಸಿದ್ದಾರೆ. 371(ಜೆ) ಪ್ರಮಾಣ ಪತ್ರವನ್ನು ತ್ವರಿತವಾಗಿ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಉಪ ವಿಭಾಗಾಧಿಕಾರಿಯನ್ನು ಬೇರೆಡೆ ವರ್ಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

371 (ಜೆ) ಪ್ರಮಾಣ ಪತ್ರ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ, ವಿಳಂಬ ಮಾಡಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !