ಶನಿವಾರ, ಆಗಸ್ಟ್ 20, 2022
21 °C
ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ

ಬೆಳೆ ಹಾನಿ ಪರಿಹಾರ ಕಲ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ಕಾರಂಜಾ ನೀರಾವರಿ ಯೋಜನೆಯ ಹೆಚ್ಚುವರಿ ಜಮೀನಿನ ರೈತರಿಗೆ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರನ್ನು ಭೇಟಿ ಮಾಡಿ ಈ ಕುರಿತು ಮನವಿಪತ್ರ ಸಲ್ಲಿಸಿದರು.

ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಗೆ ಕಬ್ಬು ಹಾಗೂ ಇತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಮಣ್ಣು ಕೊಚ್ಚಿಕೊಂಡು ಹೋದ ಕಾರಣ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಮುಂದಿನ ಐದು ವರ್ಷಗಳ ವರೆಗೆ ಕಬ್ಬು ಬೆಳೆಯಲು ಆಗದಂತಹ ಸ್ಥಿತಿ ಇದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಮನ ಸೆಳೆದರು.

ಕೂಡಲೇ ಹೆಚ್ಚುವರಿ ಜಮೀನಿನ ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಕಾರಂಜಾ ಜಲಾಶಯ ನಿರ್ಮಾಣಕ್ಕಾಗಿ ಸರ್ಕಾರ ಭೂ ಸ್ವಾಧೀನ ಪಡೆಸಿಕೊಂಡು ಈವರೆಗೂ ರೈತರಿಗೆ ವೈಜ್ಞಾನಿಕ ಪರಿಹಾರ ನೀಡದಿರುವುದು ವಿಷಾದದ ಸಂಗತಿಯಾಗಿದೆ ಎಂದು ಸಮಿತಿಯ ನಿರ್ದೇಶಕ ವೀರಭದ್ರಪ್ಪ ಉಪ್ಪನ್ ಹೇಳಿದರು.

ಅತಿವೃಷ್ಟಿಯಿಂದಾಗಿ ಕಾರಂಜಾ ಯೋಜನೆ ಹೆಚ್ಚುವರಿ ಜಮೀನಿನಲ್ಲಿ ಬೆಳೆದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತ ಪರ ಎಂದು ಹೇಳಿಕೊಳ್ಳುವ ಸರ್ಕಾರ ಇದುವರೆಗೆ ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು.

ಕಾರಂಜಾ ಯೋಜನೆ ಹೆಚ್ಚುವರಿ ಜಮೀನಿನ ಸಮೀಕ್ಷೆ ನಡೆಸಿ, ಬೆಳೆ ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಸಮೀಕ್ಷೆಯಲ್ಲಿ ಲೋಪದೋಷವಾದರೆ ಖುದ್ದು ಪರಿಶೀಲಿಸಿ ಸರಿಪಡಿಸುವೆ ಎಂದು ತಿಳಿಸಿದರು.

ಪ್ರಮುಖರಾದ ಬಸವರಾಜ ಮೂಲಗೆ, ಶಂಕರರಾವ್ ದೇವಣ್ಣನೋರ, ನಾಗಶೆಟ್ಟೆಪ್ಪ ಹಚ್ಚಿ, ಬಸವರಾಜ ಮೂಲಗೆ, ಶಂಕರರಾವ್ ಗುಂಡಪ್ಪ, ಮಾಣಿಕ ದೇವಣ್ಣನೋರ, ವೀರಶೆಟ್ಟಿ, ರಮೇಶ ರೆಡ್ಡಿ, ಸಿದ್ರಾಮಪ್ಪ, ಅರ್ಜುನ, ಮಲಶೆಟ್ಟೆಪ್ಪ, ಸೂರ್ಯಕಾಂತ ಲಾಲಪ್ಪ, ಸೋಮನಾಥ, ಕುತ್ಬುದ್ದೀನ್, ಹಣಮಂತರಾವ್, ಸಲೀಮಾ ಬೇಗಂ, ಪ್ರಭುರಾವ್, ವಿಜಯಕುಮಾರ, ಬಾಬುರಾವ್, ಮಹೇಶ, ಚಂದ್ರಶೇಖರ ಮುತ್ತಣ್ಣ, ಕರಬಸಪ್ಪ ಔರಾದ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.