ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಾಣಿಕೆಗೆ ದೇವಣಿ ತಳಿ ಸೂಕ್ತ

ಮುಖ್ಯ ಪಶು ವೈದ್ಯಾಧಿಕಾರಿ ಡಾ.ಉದಯಕುಮಾರ ಪಿ. ಹೇಳಿಕೆ
Last Updated 7 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯ ಹವಾಗುಣಕ್ಕೆ ದೇವಣಿ ತಳಿ ಹಸು ಸೂಕ್ತವಾಗಿದೆ. ದೇವಣಿ ಹಸುಗಳ ಸಾಕಾಣಿಕೆ ಮೂಲಕ ರೈತರು ಉತ್ತಮ ಆದಾಯ ಪಡೆಯಬಹುದಾಗಿದೆ’ ಎಂದು ರೈತ ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಉದಯಕುಮಾರ ಪಿ. ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಇಲ್ಲಿಯ ರೈತ ತರಬೇತಿ ಕೇಂದ್ರದಲ್ಲಿ ಗುರುವಾರ ರೈತರಿಗೆ ಆಯೋಜಿಸಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬರದಲ್ಲಿ ಒಣ ಮೇವು ತಿಂದು ಬದುಕುವ ಶಕ್ತಿ ದೇವಣಿ ತಳಿಗೆ ಇದೆ. ಅದಕ್ಕೆ ರೋಗ ನಿರೋಧಕ ಶಕ್ತಿಯೂ ಅಧಿಕ ಇದೆ. ದಿನವೊಂದಕ್ಕೆ 10 ಕೆ.ಜಿ ಒಣ ಮೇವು, 30 ಕೆ.ಜಿ ಹಸಿರು ಮೇವು ಹಾಗೂ 2 ಕೆ.ಜಿ ಹಿಂಡಿ ಕೊಟ್ಟರೆ ಸಾಕು. ಅದರ ಆರೋಗ್ಯ ಸದೃಢವಾಗಿರುತ್ತದೆ’ ಎಂದು ತಿಳಿಸಿದರು.

‘ಹೊಲಗಳಲ್ಲಿರುವ ಮನೆಗಳಲ್ಲಿ ಹಸು ಸಾಕಬಹುದು. ಅದರ ನಿರ್ವಹಣೆಯ ವೆಚ್ಚವೂ ಬಹಳ ಕಡಿಮೆ ಇರುತ್ತದೆ. ಹಸುವಿನ ಗೊಬ್ಬರವನ್ನು ಹೊಲಗದ್ದೆಗಳಿಗೆ ಬಳಸಬಹುದು. ನಿತ್ಯ ತಾಜಾ ಮೇವು ತಿನ್ನುವುದರಿಂದ ಹಸುಗಳಿಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸದು’ ಎಂದು ಹೇಳಿದರು.

‘ದೇವಣಿಯಲ್ಲೂ ದೇಸಿ ಹಾಗೂ ಮಿಶ್ರ ತಳಿ ಇವೆ. ಪಶು ವಿಶ್ವವಿದ್ಯಾಲಯದ ದೇವಣಿ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಉತ್ತಮ ತಳಿಯ ದೇವಣಿ ಕರುಗಳನ್ನು ಖರೀದಿಸಬಹುದಾಗಿದೆ. ಸ್ಥಳೀಯವಾಗಿಯೂ ಕೊಂಡುಕೊಳ್ಳಬಹುದು’ ಎಂದು ತಿಳಿಸಿದರು.

‘ಹೈನುಗಾರಿಕೆಗೆ ವಿದೇಶಿ ತಳಿಗಳಾದ ಇಂಗ್ಲೆಂಡ್‌ ಮೂಲದ ಹಸುವಿನ ಜರ್ಸಿ, ಹಾಲೆಂಡ್‌ ಮೂಲದ ಹಸುವಿನ ಎಚ್‌.ಎಫ್.ಶುದ್ಧ ಹಾಗೂ ಮಿಶ್ರ ತಳಿ, ಗುಜರಾತ್‌ನ ಖೈರಾ ಜಿಲ್ಲೆ ಮೂಲದ ಸ್ಫೂ ರ್ತಿ ಶುದ್ಧ, ಉನ್ನತೀಕರಿಸಿದ ಎಮ್ಮೆ ತಳಿಯನ್ನು ಸಾಕಬಹುದು’ ಎಂದು ಸಲಹೆ ನೀಡಿದರು.

‘ಹೈನುರಾಸುಗಳನ್ನು ಖರೀದಿಸುವ ಮೊದಲು ಕೆಲ ವಿಷಯಗಳನ್ನು ಗಮನದಲ್ಲಿಡಬೇಕು.ಹೈನುರಾಸುಗಳು ಹೊಳಪಾದ ಹಾಗೂ ಮೃದು ಚರ್ಮ ಮತ್ತು ನುಣುಪಾದ ಕೂದಲುಗಳನ್ನು ಹೊಂದಿರಬೇಕು. ಕಣ್ಣುಗಳು ಕಾಂತಿಯುತವಾಗಿದ್ದು ಚುರುಕಾಗಿರಬೇಕು’ ಎಂದು ತಿಳಿಸಿದರು.

‘ಹೈನುರಾಸುಗಳ ಬೆನ್ನುಹುರಿಯು ನೇರವಾಗಿರಬೇಕು. ಎದೆ ಗುಂಡಿಗೆ ಮತ್ತು ಹೊಟ್ಟೆ ವಿಶಾಲವಾಗಿಬೇಕು. ಹೊಟ್ಟೆಯು ಜೋತು ಬಿದ್ದಿರಬಾರದು. ನಾಲ್ಕು ಕಾಲುಗಳ ಮೇಲೆ ಸಮಾನ ಭಾರವನ್ನು ಹಾಕಿ ನಿಂತಿರಬೇಕು. ಕಾಲುಗಂಟುಗಳ ಮೇಲೆ ಬಾವು ಇರಬಾರದು’ ಎಂದು ಹೇಳಿದರು.

‘ಕೆಚ್ಚಲು ದೊಡ್ಡದಾಗಿರಬೇಕು, ಜೋತು ಬಿದ್ದಿರಬಾರದು ಮತ್ತು ಮೃದುವಾಗಿರಬೇಕು. ಕೆಚ್ಚಲಿನ ಮುಂಭಾಗದಲ್ಲಿರುವ ರಕ್ತನಾಳಗಳು ಉದ್ದವಾಗಿದ್ದು ದೊಡ್ಡವಾಗಿರಬೇಕು. ನಾಲ್ಕು ಮೊಲೆ ತೊಟ್ಟುಗಳು ಸಮಾನ ಅಂತರದಲ್ಲಿದ್ದು, ಮೃದುವಾಗಿರಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

‘ಕೆಚ್ಚಲಿನಿಂದ ಹಾಲು ಕರೆದಾಗ ಸರಾಗವಾಗಿ ಬರುವಂತಿರಬೇಕು. ಕೆಚ್ಚಲಿನಿಂದ ಹಾಲು ಸೋರಿ ಹೋಗಬಾರದು. ಹಸು ಖರೀದಿಸುವಾಗ ಅದು ಕರು ಹಾಕಿ ಎರಡು ತಿಂಗಳು ಮೀರಿರಬಾರದು. ಎರಡು ಹಿಂಗಾಲುಗಳ ನಡುವಿನ ಅಂತರ ಹೆಚ್ಚಿನದಾಗಿದ್ದು ದೊಡ್ಡದಾದ ಕೆಚ್ಚಲಿಗೆ ಸರಿಯಾದ ಸ್ಥಳಾವಕಾಶ ಸಿಗುವಂತಿರಬೇಕು’ ಎಂದು ಹೇಳಿದರು.

ಕಚೇರಿ ಸಿಬ್ಬಂದಿ ಮಂಜುನಾಥ, ಚನ್ನಬಸವ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT