ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರದಿಂದ ಸಾಗಿರುವ 18 ಕೆರೆಗಳ ಹೂಳೆತ್ತುವ ಕಾಮಗಾರಿ

ಇನ್ನಷ್ಟು ಕೆರೆಗಳ ಹೂಳು ತೆಗೆಯಲು ಜಿಲ್ಲಾಡಳಿತ ನಿರ್ಧಾರ
Last Updated 23 ಜನವರಿ 2019, 12:15 IST
ಅಕ್ಷರ ಗಾತ್ರ

ಬೀದರ್: ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜಿಲ್ಲಾ ಆಡಳಿತವು ಮೊದಲ ಹಂತದಲ್ಲಿ ಜಿಲ್ಲೆಯ 18 ಕೆರೆಗಳ ಹೂಳು ತೆಗೆಯುವ ಕಾರ್ಯಕೈಗೆತ್ತಿಕೊಂಡಿದೆ. ಬೇಸಿಗೆ ಮುಗಿಯುವ ಮೊದಲು ಒಟ್ಟು 100 ಕೆರೆಗಳ ಹೂಳು ತೆಗೆಯಲು ನಿರ್ಧರಿಸಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 126 ಕೆರೆಗಳು ಇವೆ. ತಾಂತ್ರಿಕ ಸಿಬ್ಬಂದಿಯ ನೆರವು ಪಡೆದು ಕೆರೆಯ ಒಡ್ಡಿಗೆ ಧಕ್ಕೆಯಾಗದಂತೆ ಲೈನ್‌ ಮಾರ್ಕ್‌ ಮಾಡಿ ಹೂಳು ತೆಗೆಯಲಾಗುತ್ತಿದೆ. ಬೀದರ್‌ ತಾಲ್ಲೂಕಿನ ಚಿಮಕೋಡ, ಮಮದಾಪುರ, ಸೋಲಪುರ, ಔರಾದ್‌ ತಾಲ್ಲೂಕಿನ ಚಿಂತಾಕಿ, ಕಮಲನಗರ, ಭಾಲ್ಕಿ ತಾಲ್ಲೂಕಿನ ಅಂಬೆಸಾಂಗವಿ, ಜೈನಾಪುರ, ಬಸವಕಲ್ಯಾಣದ ಪರ್ತಾಪುರ, ನಾರಾಯಣಪುರ, ಗುತ್ತಿ, ಹುಮನಾಬಾದ್ ತಾಲ್ಲೂಕಿನ ಶೆಡೊಳಾ(ಳ), ಜಲಸಂಗವಿಯ ಕೆರೆಗಳ ಹೂಳೆತ್ತುವ ಕಾಮಗಾರಿ ನಿರಂತರವಾಗಿ ಸಾಗಿದೆ.

‘100 ಕೆರೆಗಳ ಹೂಳು ತೆಗೆಯಲು ಅಗತ್ಯವಿರುವ ₹4 ಕೋಟಿ ಅನುದಾನ ಒದಗಿಸುವಂತೆ ಜಿಲ್ಲಾ ಆಡಳಿತವು ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿದೆ. ಅನುದಾನ ಬಿಡುಗಡೆಯಾದರೆ ಎಲ್ಲ ಕೆರೆಗಳ ಹೂಳೆತ್ತಲು ಸಾಧ್ಯವಾಗಲಿದೆ’ ಎಂದು ಹೇಳುತ್ತಾರೆ ಬೀದರ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ.

‘ಅನುರಾಗ್‌ ತಿವಾರಿ ಜಿಲ್ಲಾಧಿಕಾರಿಯಾಗಿದ್ದಾಗ ಕೆರೆಗಳ ಹೂಳು ತೆಗೆಯಲು ರಾಜ್ಯ ಸರ್ಕಾರ ₹1.26 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ₹49 ಲಕ್ಷ ಮಾತ್ರ ಖರ್ಚಾಗಿತ್ತು. ಉಳಿದ ₹77 ಲಕ್ಷಹಣವನ್ನು ಜಿಲ್ಲೆಯ ಕೆರೆಗಳ ಹೂಳು ತೆಗೆಯಲು ಬಳಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ.

‘ಇತ್ತೀಚಿನ ವರ್ಷಗಳಲ್ಲಿ ಕೆರೆಯ ನೀರು ನೀರಾವರಿಗೆ ಬಳಕೆಯಾಗುತ್ತಿಲ್ಲ. ಕೆರೆಯ ನೀರು ಜಾನುವಾರುಗಳಿಗೆ ಕುಡಿಯಲು ಹಾಗೂ ಅಂತರ್ಜಲಮಟ್ಟ ಹೆಚ್ಚಿಸಲು ಅನುಕೂಲಕರವಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಪ್ರಕಾರ ನೂರು ಕೆರೆಗಳ ಹೂಳು ತೆಗೆದರೆ ಒಟ್ಟು 10 ಟಿಎಂಸಿ ನೀರು ಸಂಗ್ರಹವಾಗಲಿದೆ. ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಹೇಳುತ್ತಾರೆ.

‘ಕಾಮಗಾರಿಯ ಮೇಲುಸ್ತುವಾರಿಗೆ ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಪಿಡಿಒ, ಸಣ್ಣ ನೀರಾವರಿ ಇಲಾಖೆಯ ಜೆಇ ಇದ್ದಾರೆ. ಕೆರೆಯ ಹೂಳನ್ನು ರೈತರಿಗೆ ಉಚಿತವಾಗಿ ಕೊಡಲಾಗುತ್ತಿದೆ. ದೂರು ಬಂದರೆ ತಕ್ಷಣ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎನ್ನುತ್ತಾರೆ.

‘ನಿತ್ಯ ಜೆಸಿಬಿಗೆ ₹2 ಸಾವಿರ ಬಾಡಿಗೆ, ಚಾಲಕನ ಭತ್ಯೆ ₹200 ಹಾಗೂ ಡೀಸೆಲ್‌ಗೆ ಪ್ರತ್ಯೇಕ ಹಣ ಕೊಡಲಾಗುತ್ತಿದೆ. ಜೆಸಿಬಿಗಳು ಎಂಟು ತಾಸು ಕೆಲಸ ಮಾಡುತ್ತಿವೆ. ಗ್ರಾಮ ಮಟ್ಟದ ಅಧಿಕಾರಿಗಳು ಮೇಲುಸ್ತುವಾರಿ ನಡೆಸುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಕೆರೆ ಹೂಳು ಬಳಸಿದರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಹೀಗಾಗಿ ರೈತರಿಗೆ ಉಚಿತವಾಗಿ ಹೂಳುಮಣ್ಣು ಒಯ್ಯಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT