ಭಾಲ್ಕಿ: ತಾಲ್ಲೂಕಿನ ಹಿರಿಯ ಸಾಹಿತಿ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಜಿ.ಬಿ.ವಿಸಾಜಿ (82) ಅವರು ಗುರುವಾರ ಬೆಂಗಳೂರಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಮೃತರಿಗೆ ಸಾಹಿತಿ ವಿಕ್ರಮ ವಿಸಾಜಿ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಮೃತರ ಅಂತ್ಯಕ್ರಿಯೆ ಭಾಲ್ಕಿಯ ರೈಲ್ವೆ ನಿಲ್ದಾಣ ಸಮೀಪದ ಅವರ ಸ್ವಂತ ಹೊಲದಲ್ಲಿ ಶುಕ್ರವಾರ ಮಧ್ಯಾಹ್ನ 2:30ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಸವಕಲ್ಯಾಣದ ಕೊಹಿನೂರು ಗ್ರಾಮದವರಾದ ಜಿ.ಬಿ.ವಿಸಾಜಿ ಅವರ ಪೂರ್ಣ ಹೆಸರು ಗುರುಲಿಂಗಪ್ಪ ಭೀಮರಾವ್ ವಿಸಾಜಿ. ಶಿವಗಾಂಗೇಯ ಇವರ ಕಾವ್ಯನಾಮ.
ಪಟ್ಟಣದ ಚೆನ್ನಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪ್ರಜಾವಾಣಿ ದಿನಪತ್ರಿಕೆಯ ತಾಲ್ಲೂಕು ವರದಿಗಾರರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ನೆಲದನುಡಿ-1, 2(ಸಂಪಾದನೆ), ಆನಂತ ಸಂಗಮ (ಕಥಾ ಸಂಕಲನ), ಮುಂಜಾವು (ಕವನ ಸಂಕಲನ), ಸಾಹಿತ್ಯಾಲೋಕನ (ಪ್ರಬಂಧ ಸಂಕಲನ), ವಿನಯ್ ಭಂಡಾರಿ (ಸಂಪಾದನೆ) ಸೇರಿದಂತೆ ಸುಮಾರು 23 ಪುಸ್ತಕಗಳು ಪ್ರಕಟವಾಗಿವೆ.
ಇವರ ಹರಿಹರ ದೇವನ ನಾಲ್ಕು ರಗಳೆಗಳು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ. ತೃತೀಯ ವರ್ಷಕ್ಕೆ (ಕನ್ನಡ ಐಚ್ಛಿಕ) ಪಠ್ಯ ಪುಸ್ತಕವಾಗಿತ್ತು. ಇವರ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಸೇವೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.