ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗೊಂದು ಕೆರೆ ಅಭಿವೃದ್ಧಿ ಪಡಿಸಿ: ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ

Last Updated 8 ಜುಲೈ 2021, 13:58 IST
ಅಕ್ಷರ ಗಾತ್ರ

ಬೀದರ್‌: ‘ಮೂರು ತಿಂಗಳ ಅವಧಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಕೆರೆಯನ್ನಾದರೂ ಅಭಿವೃದ್ಧಿ ಪಡಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಮೂರು, ನಾಲ್ಕು ಗ್ರಾಮಗಳು ಇರುತ್ತವೆ. ಜಲ ಸಂರಕ್ಷಣೆ ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಿಕೊಡುವ ದಿಸೆಯಲ್ಲಿ ನರೇಗಾದಲ್ಲಿ ಕೆರೆಗಳ ಜೀರ್ಣೋದ್ಧಾರ ಮಾಡಬೇಕು’ ಎಂದು ಹೇಳಿದರು.

‘ಗ್ರಾಮಗಳ ಕೆರೆಗಳ ಅಭಿವೃದ್ಧಿಯಲ್ಲಿ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಪಾತ್ರ ಮಹತ್ವದ್ದಾಗಿದೆ. ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳ ಸಭೆ ನಡೆಸಿ ಗುರಿ ನಿಗದಿಪಡಿಸಬೇಕು. ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಧಾರ್ಮಿಕ ಕ್ಷೇತ್ರಗಳಲ್ಲಿರುವ ಕಲ್ಯಾಣಿಗಳ ಹೂಳು ತೆಗೆಯಬೇಕು. ಕಲ್ಯಾಣಿಗಳ ಹೂಳು ತೆಗೆಯಲು ಗ್ರಾಮಸ್ಥರು ಭಕ್ತಿಭಾವದಿಂದ ಮುಂದೆ ಬರುತ್ತಾರೆ. ಇದರಿಂದ ಕಲ್ಯಾಣಿಗಳು ಸ್ವಚ್ಛಗೊಳ್ಳುತ್ತವೆ. ಅಂತರ್ಜಲ ಮಟ್ಟ ಹೆಚ್ಚಾಗಲು ಅನುಕೂಲವೂ ಆಗುತ್ತದೆ’ ಎಂದು ತಿಳಿಸಿದರು.

* * *
ಶೌಚಾಲಯ ನಿರ್ಮಾಣಕ್ಕೆ ₹ 20 ಸಾವಿರ ಅನುದಾನ

‘ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಮೊದಲು ಪರಿಶಿಷ್ಟ ಸಮುದಾಯದವರಿಗೆ ₹ 12 ಸಾವಿರ ಕೊಡಲಾಗುತ್ತಿತ್ತು. ಇದೀಗ ಅನುದಾನವನ್ನು ₹ 20 ಸಾವಿರಕ್ಕೆ ಹೆಚ್ಚಿಸಲಾಗಿದೆ’ ಎಂದು ಈಶ್ವರಪ್ಪ ತಿಳಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿ ಪರಿಶಿಷ್ಟ ಫಲಾನುಭವಿಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಪಿಡಿಒಗಳು ಹಾಗೂ ಪಂಚಾಯಿತಿ ಅಧ್ಯಕ್ಷರು ಶೌಚಾಲಯ ಕಟ್ಟಿಸಿಕೊಳ್ಳಲು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಬೇಕು. ಬಯಲು ಶೌಚ ನಿಲ್ಲುವಂತೆ ಮಾಡಬೇಕು’ ಎಂದು ಹೇಳಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಬೇಕು. ಪ್ರತಿ ವರ್ಷ ಅದೇ ಜಾಗದಲ್ಲಿ ನೆಟ್ಟು ಲೆಕ್ಕ ತೋರಿಸಬಾರದು. ಸಸಿ ನೆಟ್ಟ ಮೇಲೆ ಅದನ್ನು ಬೆಳೆಸಲು ಕೆಲ ಕುಟುಂಬಗಳಿಗೆ ಜವಾಬ್ದಾರಿ ಕೊಡಬೇಕು. ಸಸಿಗೆ ಕುಟುಂಬದ ಹಿರಿಯರ ಹೆಸರಿಟ್ಟು ಪೋಷಣೆಗೆ ಪ್ರೇರೇಪಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್‌ ಮಾತನಾಡಿ, 'ಎಂಜಿಎನ್‌ಆರ್‌ಇಜಿಯಲ್ಲಿ ಬೀದರ್‌ ಜಿಲ್ಲೆ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿ ಇದೆ. 2,26,858 ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಏಪ್ರಿಲ್ 1ರಿಂದ ಇಲ್ಲಿಯ ವರೆಗೆ 21,24,022 ದಿನಗಳ ಉದ್ಯೋಗ ನೀಡಲಾಗಿದೆ’ ಎಂದರು.

* * *
ಜಲ ಜೀವನ ಗ್ರಾಮಗಳ ಆಯ್ಕೆಗೆ ಅಪಸ್ವರ

‘ಜಲ ಜೀವನ ಮಿಷನ್‌ ಯೋಜನೆಗೆ ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಗ್ರಾಮಗಳ ಆಯ್ಕೆ ಮಾಡಿಲ್ಲವೆಂದು ಚುನಾಯಿತ ಪ್ರತಿನಿಧಿಗಳು ಅಪಸ್ವರ ಎತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ತಿಳಿಸಿದರು.

‘ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಯಾವ ಕಾರಣಕ್ಕಾಗಿ ಜಲ ಜೀವನ ಮಿಷನ್‌ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮಗಳ ಆಯ್ಕೆಗೆ ಯಾವ ಮಾನದಂಡಗಳನ್ನು ಅನುಸರಿಸಲಾಗಿದೆ ಎನ್ನುವುದನ್ನು ಚುನಾಯಿತ ಪ್ರತಿನಿಧಿಗಳಿಗೆ ಮನವರಿಕೆ ಮಾಡಬೇಕು’ ಎಂದು ಸಚಿವ ಈಶ್ವರಪ್ಪ ಸೂಚನೆ ನೀಡಿದರು.

‘ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಸರಬರಾಜು ಆಗಬೇಕು ಎನ್ನುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ ಯೋಜನೆಯ ಯಶಸ್ವಿಗೆ ಶ್ರಮಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್‌ ಮಾತನಾಡಿ, ‘ಬಹು ಗ್ರಾಮ ಯೋಜನೆಯಲ್ಲಿ ಆಯ್ಕೆಯಾದ ಗ್ರಾಮಗಳಿಗೆ ಸರಿಯಾಗಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಎಲ್ಲ ಮಗ್ಗಲುಗಳಿಂದ ಪರಿಶೀಲನೆ ನಡೆಸಿ ಜಲ ಜೀವನ ಮಿಷನ್‌ ಯೋಜನೆಗೆ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಜಲ ಜೀವನ ಮಿಷನ್‌ ಯೋಜನೆಗೆ ಜಿಲ್ಲೆಯಲ್ಲಿ 135 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ತಲಾ ಶೇಕಡ 37.5 ರಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಾಲು ಇದೆ. ಒಟ್ಟು ₹ 81.71 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಸಮುದಾಯ ಕೊಡುಗೆ ಕಡಿಮೆ ಇದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ್ ಪಾಟೀಲ ಇದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT