ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ

ಎಲ್ಲ ಆಸ್ಪತ್ರೆಗಳಲ್ಲಿ ಒಆರ್‌ಎಸ್‌ ವಿತರಣಾ ಕೇಂದ್ರ ಆರಂಭ: ಡಾ. ಜಬ್ಬಾರ್‌
Last Updated 3 ಜೂನ್ 2019, 15:39 IST
ಅಕ್ಷರ ಗಾತ್ರ

ಬೀದರ್: ಆರೋಗ್ಯ ಇಲಾಖೆಯಿಂದ ಜಿಲ್ಲೆಯಾದ್ಯಂತ ಜೂನ್ 17ರ ವರೆಗೆ ಹಮ್ಮಿಕೊಂಡಿರುವ ತೀವ್ರತರ ಅತಿಸಾರ ಭೇದಿಯ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಇಲ್ಲಿಯ ಗುರುನಗರದ ಯೂರೋ ಕಿಡ್ಸ್ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಸೋಮವಾರ ಚಾಲನೆ ನೀಡಿದರು.

‘ಅತಿಸಾರ ಭೇದಿಯು ಐದು ವರ್ಷದೊಳಗಿನ ಮಕ್ಕಳಿಗೆ ಬರುವ ಮಾರಣಾಂತಿಕ ಕಾಯಿಲೆಯಾಗಿದೆ. ಶೇ 10ರಷ್ಟು ಮಕ್ಕಳು ಈ ರೋಗದಿಂದ ಮರಣ ಹೊಂದುತ್ತಿದ್ದಾರೆ. ಇದರ ತಡೆಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಐದು ವರ್ಷದೊಳಗಿನ ಪ್ರತಿ ಮಗುವಿಗೆ ಎರಡು ಒ.ಆರ್.ಎಸ್ ಪೊಟ್ಟಣ,14 ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತಿದ್ದು, ಇವುಗಳಿಂದ ಅತಿಸಾರ ಭೇದಿಯನ್ನು ತಡೆಯಬಹುದು. ವೈಯಕ್ತಿಕ ಶುಚಿತ್ವ, ಪರಿಸರ ನೈರ್ಮಲ್ಯ, ಪೌಷ್ಟಿಕ ಆಹಾರ ಹಾಗೂ ಹಾಲುಣಿಸುವಿಕೆ ಮೂಲಕ ಕೂಡ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಒ.ಆರ್.ಎಸ್, ಝಿಂಕ್ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ 1,353 ಆಶಾ ಕಾರ್ಯಕರ್ತೆಯರು, 273 ಆರೋಗ್ಯ ಸಹಾಯಕರುಗಳು ಮತ್ತು 1,893 ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಅನುಗುಣವಾಗಿ ಒ.ಆರ್.ಎಸ್ ಹಾಗೂ ಝಿಂಕ್ ಮಾತ್ರೆ ಹಾಗೂ ಸಿರಪ್‌ಗಳನ್ನು ನೀಡುವರು. ಒ.ಆರ್.ಎಸ್ ದ್ರಾವಣ ಸಿದ್ಧಪಡಿಸುವ ವಿಧಾನ ಹಾಗೂ ಕೈತೊಳೆಯುವ ವಿಧಾನಗಳ ಕುರಿತು ಮಾಹಿತಿ ನೀಡುವರು. ಶೌಚಾಲಯ ಬಳಕೆಯ ಉಪಯೋಗಗಳ ತಿಳಿವಳಿಕೆ ನೀಡುವರು’ ಎಂದು ಹೇಳಿದರು.

ಡಾ.ಮಾರ್ಥಂಡರಾವ್ ಕಾಶೆಂಪೂರಕರ್, ಒ.ಆರ್.ಎಸ್ ದ್ರಾವಣ ತಯಾರಿಸುವ ವಿಧಾನವನ್ನು ವಿವರಿಸಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಅನಿಲಕುಮಾರ ಚಿಂತಾಮಣಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ದೀಪಾ ಖಂಡ್ರೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ, ಸಂಸ್ಥೆಯ ಅಧ್ಯಕ್ಷ ರಾಜು ಕಾಶೆಂಪೂರ,ಪ್ರಾಚಾರ್ಯೆ ಉಜ್ವಲಾ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸುಭಾಷ ಮುಧಾಳೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬಳೆ, ಶ್ರಾವಣ ಜಾಧವ್, ಜಿಲ್ಲಾ ಮೇಲ್ವಿಚಾರಕ ಶಿವಶಂಕರ, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಕಾಶೀನಾಥ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT