ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ಬದಲಿಸಿದ ಗಾಳಿ, ತಪ್ಪಿದ ಮಿಡತೆ ಗಂಡಾಂತರ

ಮಹಾರಾಷ್ಟ್ರದ ಸಂಪರ್ಕದಲ್ಲಿ ರಾಜ್ಯದ ಕೃಷಿ ಅಧಿಕಾರಿಗಳು
Last Updated 28 ಮೇ 2020, 19:30 IST
ಅಕ್ಷರ ಗಾತ್ರ

ಬೀದರ್: ಲಕ್ಷಾಂತರ ಸಂಖ್ಯೆಯಲ್ಲಿ ಗುಂಪಿನಲ್ಲಿ ಮಹಾರಾಷ್ಟ್ರದ ನಾಸಿಕ್‌ನಿಂದ ರಾಜ್ಯದತ್ತ ಮುಖ ಮಾಡಿದ್ದ ಮಿಡತೆಗಳು ಗಾಳಿಯ ದಿಕ್ಕು ಬದಲಾದ ಕಾರಣ ಮಧ್ಯಪ್ರದೇಶದತ್ತ ಹಾರಾಟ ಶುರು ಮಾಡಿವೆ. ಹೀಗಾಗಿ ರಾಜ್ಯದ ರೈತರ ಆತಂಕ ಹಾಗೂ ಅಧಿಕಾರಿಗಳ ತಲೆ ನೋವು ಕಡಿಮೆಯಾಗಿದೆ.

ಸಾಮಾನ್ಯವಾಗಿ ಪೂರ್ವಾಭಿಮುಖವಾಗಿ ಚಲಿಸುವ ಮಿಡತೆಗಳು ವಾತಾವರಣದಲ್ಲಿನ ಏರಿಳಿತಳಿಂದಾಗಿ ಮಹಾರಾಷ್ಟ್ರದ ಔರಂಗಾಬಾದ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ರೈತರ ಹೊಲಗಳ ಮೇಲೆ ದಾಳಿ ಇಟ್ಟು ಬೆಳೆಗಳನ್ನು ತಿಂದು ಹಾಕಿದ್ದವು. ಗಾಳಿ ದಿಕ್ಕು ಬದಲಾದ ನಂತರ ಭಂಡಾರ ಜಿಲ್ಲೆಯನ್ನು ಪ್ರವೇಶಿಸಿ, ಮಧ್ಯಪ್ರದೇಶ ಹಾಗೂ ತೆಲಂಗಾಣದ ಗಡಿ ಜಿಲ್ಲೆಗಳ ರೈತರಲ್ಲಿ ತಲ್ಲಣ ಮೂಡಿಸಿವೆ.

ನಾಗಪುರ ಬೀದರ್‌ನಿಂದ 512 ಕಿ.ಮೀ ಅಂತರದಲ್ಲಿದೆ. ಮಹಾರಾಷ್ಟ್ರ ಸರ್ಕಾರ ವರದಾ, ಯಾವತ್ಮಾಳ, ನಾಂದೇಡ ಹಾಗೂ ಲಾತೂರ್ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬೀದರ್ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ನೆರೆಯ ಜಿಲ್ಲೆಯ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಮಿಡತೆಗಳ ಚಲನವಲನದ ಪ್ರತಿ ಹಂತದ ಮಾಹಿತಿ ಪಡೆಯುತ್ತಿದ್ದಾರೆ.


ಕರ್ನಾಟಕಕ್ಕಿಂತಲೂ ತೆಲಂಗಾಣದ ಕಾಮರೆಡ್ಡಿ ಹಾಗೂ ನಿಜಾಮಾಬಾದ್ ಜಿಲ್ಲೆಗೆ ಹೆಚ್ಚು ಅಪಾಯ ಇದೆ. ಆಕಸ್ಮಾತ್‌ ಇತ್ತ ಮುಖ ಮಾಡಿದರೆ ಈ ಜಿಲ್ಲೆಗಳನ್ನು ದಾಟಿ ಬರಲು ಕನಿಷ್ಠ ಐದು ದಿನ ಬೇಕಾಗಲಿದೆ. ಆದರೆ ಅಂತಹ ಪರಿಸ್ಥಿತಿ ಎದುರಾಗಿಲ್ಲ.

‘ದೆಹಲಿಯಲ್ಲಿರುವ ಮಿಡತೆ ಎಚ್ಚರಿಕೆ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಮಿಡತೆಗಳ ಗುಂಪು ಮಧ್ಯಪ್ರದೇಶದತ್ತ ಮುಖ ಮಾಡಿದೆ. ಕರ್ನಾಟಕದ ಗಡಿ ಜಿಲ್ಲೆಗಳ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ತಿಳಿಸಿದ್ದಾರೆ.

‘ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಕ್ರಿಮಿನಾಶಕ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಸಹಾಯಕ ಕೃಷಿ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಮಿಡತೆಗಳು ಬೀದರ್ ಜಿಲ್ಲೆಯತ್ತ ಬರುತ್ತಿರುವುದು ಗೊತ್ತಾದ ತಕ್ಷಣ ರೈತರಿಗೆ ತಿಳಿಸಲಾಗುವುದು’ ಎಂದು ಹೇಳಿದ್ದಾರೆ.

‘ಮಿಡತೆಗಳು ಬೆಳಿಗ್ಗೆ 10 ತಾಸು ಹಾಗೂ ನಿತ್ಯ 150 ಕಿ.ಮೀ. ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಗಾಳಿಯ ದಿಕ್ಕು ಅವಲಂಬಿಸಿ ಪೂರ್ವಾಭಿಮುಖವಾಗಿ ಹಾರುತ್ತವೆ. ಒಂದು ಗುಂಪು ಮಧ್ಯಪ್ರದೇಶದ ಕಡೆ ಹೋಗಿರಬಹುದು. ಗುಂಪು ಗುಂಪುಗಳಲ್ಲಿ ಬರುವುದರಿಂದ ಇನ್ನುಳಿದ ಹಿಂದಿನ ಗುಂಪುಗಳ ಮೇಲೂ ನಿಗಾ ಇಡಬೇಕಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ ಹೇಳಿದ್ದಾರೆ.

‘ಮಿಡತೆಗಳು ಉತ್ತರ ಹಾಗೂ ಪೂರ್ವಾಭಿಮುಖವಾಗಿ ಹೊರಟಿವೆ. ಮಹಾರಾಷ್ಟ್ರದ ನಾಗಪುರದಿಂದ ಭಂಡಾರ ಜಿಲ್ಲೆಗೆ ಹೋಗಿವೆ. ಹೀಗಾಗಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT