ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ನೆಟೆ ರೋಗ: ರೈತರಿಗೆ ಸಲಹೆ

ಕೃಷಿ ವಿಜ್ಞಾನಿಗಳು, ಅಧಿಕಾರಿಗಳಿಂದ ಕ್ಷಿಪ್ರ ಸಂಚಾರ ಸಮೀಕ್ಷೆ
Last Updated 17 ಡಿಸೆಂಬರ್ 2020, 15:22 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ಅಲ್ಲಲ್ಲಿ ತೊಗರಿ ಸಾಯುವುದು ಹಾಗೂ ನೆಟೆ ಹಾಯುವುದನ್ನು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳ ಕ್ಷಿಪ್ರ ಸಂಚಾರ ಸಮೀಕ್ಷಾ ತಂಡ ಪತ್ತೆ ಮಾಡಿದೆ.

ಸದ್ಯ ಬೆಳೆ ಮಾಗುವ ಹಂತದಲ್ಲಿ ಇರುವ ಕಾರಣ ಯಾವುದೇ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂದು ತಂಡದಲ್ಲಿದ್ದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸುನೀಲ ಕುಲಕರ್ಣಿ ತಿಳಿಸಿದರು.

ತೊಗರಿ ಒಣಗಲು/ನೆಟೆ ಹಾಯಲು ಹವಾಮಾನ ವೈಪರೀತ್ಯ, ಹೊಲದಲ್ಲಿ ಹಸಿ ಹೆಚ್ಚಾಗುವುದು, ಫೈಟೋಫ್ತರಾ ಮಚ್ಚೆರೋಗ, ನೆಟೆ ರೋಗ, ಒಣ ಬೇರೆ ಕೊಳೆರೋಗ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದರು.

ಬೆಳೆ ಸಾಯುವುದರಿಂದ ಅಪಾರ ಹಾನಿ ಸಂಭವಿಸುತ್ತದೆ. ಬೆಳೆಗಾರರು ತೊಗರಿ ಸಾಯುವ ರೋಗಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ವರ್ಷದಿಂದ ವರ್ಷಕ್ಕೆ ರೋಗದ ತೀವ್ರತೆ ಹೆಚ್ಚುತ್ತಲೇ ಹೋಗುತ್ತದೆ. ಕಾರಣ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

ರೋಗದ ತೀವ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಏಕದಳ ಧಾನ್ಯಗಳಿಂದ (ಜೋಳ) ಎರಡು-ಮೂರು ವರ್ಷ ಬೆಳೆ ಪರಿವರ್ತನೆ ಮಾಡಬೇಕು. ಬೇಸಿಗೆಯಲ್ಲಿ ಆಳವಾದ ಮಾಗಿ ಉಳುಮೆ ಮಾಡಬೇಕು. ತೊಗರಿ ಬೆಳೆಯನ್ನು ತಗ್ಗಾದ ಪ್ರದೇಶದಲ್ಲಿ (ನೀರು ಹಿಡಿಯುವ ಜಾಗದಲ್ಲಿ) ಬೆಳೆಯಬಾರದು. ಪ್ರಮುಖ ರೋಗಗಳ ನಿರೋಧಕ ತಳಿ(ಜಿ.ಆರ್.ಜಿ-811, ಜಿ.ಆರ್.ಜಿ-152 ಹಾಗೂ ಬಿ.ಎಸ್.ಎಂ.ಆರ್- 736) ಗಳನ್ನು ಬಳಸಬೇಕು. ತೊಗರಿ ಜತೆಗೆ ಜೋಳವನ್ನು ಮಿಶ್ರ/ ಅಂತರ ಬೆಳೆಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

4 ಗ್ರಾಂ. ಟ್ರೈಕೋಡರ್ಮಾ ಜೈವಿಕ ಶೀಲಿಂದ್ರ ನಾಶಕದಿಂದ ಪ್ರತಿ ಕಿ. ಗ್ರಾಂ. ಬೀಜಕ್ಕೆ ಬೀಜೋಪಚಾರ ಮಾಡಬೇಕು. 2 ಕಿ. ಗ್ರಾಂ. ಟ್ರೈಕೋಡರ್ಮಾ ಪುಡಿಯನ್ನು 250 ಕಿ. ಗ್ರಾಂ. ಪುಡಿ ಮಾಡಿದ ತಿಪ್ಪೆಗೊಬ್ಬರ ಮತ್ತು 50 ಕಿ. ಗ್ರಾಂ. ಬೇವಿನ ಬೀಜದ ಪುಡಿಯಲ್ಲಿ ಮಿಶ್ರ ಮಾಡಿ ಶೇ 50 ರಷ್ಟು ತೇವಾಂಶ ಇರುವಂತೆ ಮಾಡಿ, ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ 7 ದಿನಗಳ ವರೆಗೆ ಇಟ್ಟು 1 ಹೇಕ್ಟರ್ ಜಮೀನಿಗೆ ಬಿತ್ತುವ ವೇಳೆ ಉಪಯೋಗಿಸಬೇಕು. ಪ್ರಾರಂಭಿಕ ಹಂತದಲ್ಲಿ ರೋಗ ಬಾಧಿತ ಗಿಡಗಳನ್ನು ಕಿತ್ತಿ ಸುಡಬೇಕು. ನೀರಿನ ಅನುಕೂಲ ಇದ್ದಲ್ಲಿ ಹೂ ಮತ್ತು ಕಾಯಿ ಬಿಟ್ಟಾಗ ಬೆಳೆಗೆ ನೀರು ಹಾಯಿಸಬೇಕು. ಬೆಳೆ ಶೇ 50 ರಷ್ಟು ಹೂ ಬಿಟ್ಟಾಗ ಪಲ್ಸ್ ಮ್ಯಾಜಿಕ್ ಸಿಂಪರಣೆ ಮಾಡಬೇಕು. ಬೆಳೆ ಹೂವಾಡುವ ಹಂತದಲ್ಲಿ ಮಂಜಿನ ಬಾಧೆ ಹಾಗೂ ಎಲೆಚುಕ್ಕೆ ರೋಗದ ಬಾಧೆಯಿಂದ ಆಗುವ ಹಾನಿ ತಡೆಗಟ್ಟಲು ಹೆಕ್ಸಾಕೋನಾಜೋಲ್ 1 ಮಿ.ಲೀ. ಹಾಗೂ ಪ್ಲ್ಯಾನೋಪಿಕ್ಸ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಹೇಳಿದರು.

ಹೆಚ್ಚಿನ ಮಾಹಿತಿಗೆ ಕೃಷಿ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ, ಸಹಾಯಕ ಕೃಷಿ ನಿರ್ದೇಶಕರಾದ ಮಾರ್ಥಂಡ, ಅಬ್ದುಲ್ ಮಾಜೀದ್ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT