ಮಾವಿಗೆ ಬೂದು ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

7

ಮಾವಿಗೆ ಬೂದು ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

Published:
Updated:
Prajavani

ಬೀದರ್‌: ಮಾವಿನ ಮರಗಳು ಡಿಸೆಂಬರ್‌ನಿಂದ ಹೂವು ಬಿಡುತ್ತಿವೆ. ಶೀತದಿಂದಾಗಿ ರಸ ಹೀರುವ ಕೀಟ ಹಾಗೂ ಬೂದು ರೋಗ ಕಂಡು ಬಂದಿದ್ದು, ಇಳುವರಿಯ ಮೇಲೆ ಪರಿಣಾಮ ಬೀರಲಿದೆ. ಮಾವು ಬೆಳೆಗಾರರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತೋಟಗಾರಿಕೆ ತಜ್ಞರು ಸಲಹೆ ನೀಡಿದ್ದಾರೆ.

ತೇವಾಂಶ ಹಾಗೂ ಏರಿಳಿತದ ತಾಪಮಾನದಿಂದಾಗಿ ಶೀಲಿಂದ್ರ ರೋಗ ಬರುತ್ತದೆ. ಹೂವಿನ ಜಿಗಿ ಹುಳು ಕಾಟದಿಂದ ಹೂವಿಗೆ ರೋಗ ಕಾಣಿಸಿಕೊಳ್ಳುತ್ತದೆ. ಕಾಯಿ ಬೆಳವಣಿಗೆಯ ಸಮಯದಲ್ಲಿ ಅಧಿಕ ಉಷ್ಣಾಂಶ, ಅಧಿಕ ಗಾಳಿ ,ಕಳಪೆ ಮಣ್ಣು, ದೋಷಯುಕ್ತ ಹೂವುಗಳು, ಕಳಪೆ ಪರಾಗಸ್ಪರ್ಶ, ನೀರಿನ ಕೊರತೆ, ಪೋಷಕಾಂಶಗಳ ಕೊರತೆಯಿಂದ ರೋಗ ಬರುತ್ತದೆ.

ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರ ಕೊಡಬೇಕು. ಸದ್ಯ ಮರಗಳಲ್ಲಿ ಗೋಲಿ ಆಕಾರದಲ್ಲಿ ಹಣ್ಣು ಬೆಳೆಯುತ್ತಿವೆ. ಪ್ರಸ್ತುತ ಮ್ಯಾಂಗೊ ಸ್ಪೆಷ್‌ ಸಿಂಪಡಣೆ ಮಾಡಬೇಕು. ನಂತರ ಲಘು ಪೋಷಕಾಂಶಗಳಾದ ಬೋರಾನ್‍ ಅನ್ನು 0.6 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟ ಮತ್ತು ರೋಗಗಳನ್ನು ಸಮಯೋಚಿತವಾಗಿ ನಿಯಂತ್ರಿಸಬೇಕು.

ಬೂದು ರೋಗ:
ಡಿಸೆಂಬರ್‌ನಲ್ಲಿ ಕಾಣಿಸಿಕೊಳ್ಳುವ ಬೂದು ರೋಗ ಮಾರ್ಚ್‌ ಅಂತ್ಯದ ವರೆಗೂ ಇರುತ್ತದೆ. ಈ ರೋಗದಿಂದ ಶೇಕಡ 30 ರಿಂದ ಶೇಕಡ 90 ರಷ್ಟು ಇಳುವರಿ ಕಡಿಮೆಯಾಗುತ್ತದೆ. ತಂಪಾದ ವಾತಾವರಣದಿಂದ ರೋಗ ಹೆಚ್ಚು ಹರಡುತ್ತದೆ.

ಈ ರೋಗವು ಹೂವಿನ ತೊಟ್ಟು, ಹೂವು, ಎಲೆ ಬಟಾಣಿ ಗಾತ್ರದ ಕಾಯಿ ಹಾಗೂ ಎಲೆಗಳ ತಳಭಾಗದಲ್ಲಿ ಬಿಳಿಯ ಪುಡಿಯಂತೆ ಕಾಣಿಸಿಕೊಳ್ಳುತ್ತದೆ. ರೋಗವು ತೀವ್ರವಾದಾಗ ಬೆಳವಣಿಗೆ ಕುಂಠಿತಗೊಂಡು ಎಲೆಗಳು ಉದುರುತ್ತವೆ. ಈ ಸಮಯದಲ್ಲಿ 3 ಗ್ರಾಂ. ಗಂಧಕ ಅಥವಾ 1 ಗ್ರಾಂ. ಟ್ರೇಡಿಮೊಫಿನ್ 50 ಡಬ್ಲ್ಯೂ.ಪಿ. ಅಥವಾ 1 ಗ್ರಾಂ. ಹೆಕ್ಸಾಕೋನೊಜೊಲ್ ಎಸ್.ಇ.ಸಿ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !