ಅಸ್ಥಿರ ಸರ್ಕಾರ ವಜಾಗೊಳಿಸಿ: ರಾಜ್ಯಪಾಲರಿಗೆ ಈಶ್ವರ ಖಂಡ್ರೆ ಆಗ್ರಹ

ಬಸವಕಲ್ಯಾಣ: ‘ಇಲಾಖೆಯಲ್ಲಿನ ಮುಖ್ಯಮಂತ್ರಿಯ ವರ ಹಸ್ತಕ್ಷೇಪದ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪನವರು ಪ್ರಧಾನಿಗೆ ದೂರು ನೀಡಿರುವುದು ಸರ್ಕಾರದ ಅಸ್ಥಿರತೆಗೆ ಹಿಡಿದ ಕನ್ನಡಿಯಾಗಿದ್ದು, ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಕಾರ್ಯಾ ಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.
ಅವರು ನಗರದಲ್ಲಿ ಗುರುವಾರ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅವರ ಪ್ರಚಾರದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಒಬ್ಬ ಹಿರಿಯ ಸಚಿವರೇ ಮುಖ್ಯಮಂತ್ರಿ ವಿರುದ್ಧ ಬಂಡೆದ್ದಿರುವುದು ಇತಿಹಾಸದಲ್ಲಿಯೇ ಮೊದಲು. ಅಷ್ಟಕ್ಕೂ ಆಪರೇಷನ್ ಕಮಲದ ಮೂಲಕ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಈ ಪಾಪದ ಕೂಸು ಬೇಗ ಹೋಗಬೇಕಾಗಿದೆ. ವಿಧಾನಸಭೆ ಚುನಾವಣೆ ಘೋಷಿಸಿ ಜನಮತ ಪಡೆದು ಕೊಳ್ಳುವುದು ಉತ್ತಮ’ ಎಂದರು.
‘ಸರ್ಕಾರ ಬಸವಣ್ಣನವರ ಕಾರ್ಯಕ್ಷೇತ್ರದ ನೆಲದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಲಿಂಗಾಯತ ಅಭಿವೃದ್ಧಿ ನಿಗಮ ಘೋಷಿಸಿದರೂ ಹಣ ಬಿಡುಗಡೆ ಮಾಡಿಲ್ಲ. ಮರಾಠಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಾತಿ ಆಗಿಲ್ಲ. ಮುಖ್ಯಮಂತ್ರಿಯಾದ 24 ಗಂಟೆಗಳಲ್ಲಿ ಮರಾಠರನ್ನು 2 ಎ ಗೆ ಸೇರ್ಪಡೆ ಮಾಡುತ್ತೇನೆ ಎಂದು ಭರವಸೆ ನೀಡಿ ಅದನ್ನು ಈಡೇರಿಸಿಲ್ಲ. ಇಂಥ ಸುಳ್ಳು ಹೇಳುವ ಮುಖ್ಯಮಂತ್ರಿ ಬೇಕೆ’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.