ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ

7
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಎಚ್ಚರಿಕೆ

ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ

Published:
Updated:
Deccan Herald

ಬೀದರ್‌: ‘ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳು ಸರಿಯಾಗಿ ಲಭಿಸುತ್ತಿಲ್ಲ. ಅಲ್ಲಿ ಅನೇಕ ಸಮಸ್ಯೆಗಳು ತುಂಬಿಕೊಂಡಿವೆ. ಬ್ರಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅವರಿಗೆ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಸ್ಟ್‌ 9 ರಂದು ಬೀದರ್‌ಗೆ ಭೇಟಿ ನೀಡಲಿದ್ದಾರೆ. ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ಸುಲಭವಾಗಿ ದೊರಕುವಂತೆ ಮಾಡಬೇಕು ಎಂದು ಅವರಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

‘ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಆಪರೇಷನ್‌ ಥಿಯೇಟರ್‌ನಲ್ಲಿ ವಿದ್ಯುತ್‌ ಕಡಿತಗೊಂಡರೆ ಜನರೇಟರ್‌ ಅನ್‌ ಮಾಡಲು 10 ನಿಮಿಷ ಬೇಕಾಗುತ್ತದೆ. ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ತೊಡಗಿದ್ದರೆ ರೋಗಿಯ ಗತಿ ಏನು? ಇಂತಹ ವಿಷಯಗಳನ್ನು ಅಧಿಕಾರಿಗಳಿಗೆ ಹೇಳಬೇಕೆ?’ ಎಂದು ಬ್ರಿಮ್ಸ್‌ ವೈದ್ಯಕೀಯ ನಿರ್ದೇಶಕ ಚೆನ್ನಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಬ್ರಿಮ್ಸ್‌ ವಿಷಯದಲ್ಲಿ ಸರ್ಕಾರ ಗಂಭೀರವಾಗಿದೆ. ಎಷ್ಟು ಜನ ಮನೆಗೆ ಹೋಗುತ್ತಾರೆ ಗೊತ್ತಿಲ್ಲ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಮಾತನಾಡಿ, ‘ಬ್ರಿಮ್ಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಮೂರು ಪತ್ರಗಳನ್ನು ಬರೆಯಲಾಗಿದೆ. ಸರ್ಕಾರವೇ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ ಮಾತನಾಡಿ, ‘ಸಾರ್ವಜನಿಕರಿಗೆ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸರಿಯಾಗಿ ಸೌಲಭ್ಯಗಳು ದೊರಕುತ್ತಿಲ್ಲ. ಬ್ರಿಮ್ಸ್‌ನಲ್ಲಿ ಕೆಲ ಸುಧಾರಣೆ ತರಬೇಕಿದೆ’ ಎಂದು ಹೇಳಿದರು.

‘ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞರ ವೈದ್ಯರ ಕೊರತೆ ಇದೆ. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ಹಾಗೂ ಆಹಾರ ಪೂರೈಸುವ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಿದೆ. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ತೀವ್ರಗೊಳಿಸಬೇಕಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಶಿವಶಂಕರ, ಡಿಡಿಪಿಐ ಇನಾಯತ್‌ಅಲಿ ಶಿಂಧೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕಿಶೋರ ಜೋಶಿ, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ನಗರಸಭೆ ಆಯುಕ್ತರು ಇದ್ದರು.

ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ
ಬೀದರ್‌: ‘ಎರಡು ವರ್ಷಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತಹ ಹೊಸ ಯೋಜನೆಗಳನ್ನು ಸಿದ್ಧಪಡಿಸಿ ಎರಡು ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

‘ಬೀದರ್‌ ಉತ್ಸವ ನಡೆಸಲು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಅದಕ್ಕಾಗಿ ಅಗತ್ಯ ಸಮಿತಿಗಳನ್ನೂ ರಚಿಸಬೇಕು. ಬೀದರ್‌ ಉತ್ಸವ ಹಾಗೂ ಮಹಾನಗರಗಳಲ್ಲಿ ರೋಡ್‌ಶೋ ನಡೆಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಯತ್ನಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲೂ ಕೆಲವಷ್ಟು ಸುಧಾರಣೆಗಳನ್ನು ತರಲು ಪ್ರಯತ್ನಿಸಬೇಕು. ಪ್ರತಿಯೊಂದಕ್ಕೂ ಸರ್ಕಾರದ ಆದೇಶಕ್ಕಾಗಿ ಕಾಯುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಪ್ರವಾಸೋದ್ಯಮ ಇಲಾಖೆಯ ಬಳಿ ₹ 10 ಕೋಟಿ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬೀದರ್‌ ಜಿಲ್ಲೆ ಶಿಕ್ಷಣದಲ್ಲಿ ಹಿಂದೆ ಉಳಿದಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಒಟ್ಟಾರೆ ಜಿಲ್ಲೆಗೆ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !