ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯೊಳಗೆ ಕಾರ್ಯಕ್ರಮ ಪೂರ್ಣಗೊಳಿಸಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಸೂಚನೆ
Last Updated 12 ನವೆಂಬರ್ 2019, 12:35 IST
ಅಕ್ಷರ ಗಾತ್ರ

ಬೀದರ್‌: ‘ಸರ್ಕಾರ ನಿಗದಿಪಡಿಸಿದ ಪ್ರಮುಖ ಕಾರ್ಯಕ್ರಮಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸ್ಮಶಾನ ಭೂಮಿಗೆ ಜಮೀನು ಗುರುತಿಸಿ ಮಂಜೂರಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ಕೆಲ ಕಂದಾಯ ಗ್ರಾಮಗಳ ಘೋಷಣೆಯ ಅಂತಿಮ ಸೂಚನೆಗೆ ಬಾಕಿ ಇರುವ ಕಾರ್ಯವನ್ನೂ ಕಾಲಮಿತಿಯೊಳಗೆ ಮುಗಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ 635 ಗ್ರಾಮಗಳ ಪೈಕಿ 74 ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲ. ಸರ್ಕಾರಿ ಹಾಗೂ ಖಾಸಗಿ ಜಮೀನು ಲಭ್ಯ ಇಲ್ಲದ 32 ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸುವ ಕಾರ್ಯ ಬಾಕಿ ಇದೆ. ದೊಡ್ಡ ಹಳ್ಳಿಗಳಲ್ಲಿ ಒಂದು ಎಕರೆ, ಸಣ್ಣ ಹಳ್ಳಿಯಲ್ಲಿ 20 ಗುಂಟೆ ಜಾಗ ಗುರುತಿಸುವ ಕಾರ್ಯವನ್ನು ತಹಶೀಲ್ದಾರರು ಮಾಡಬೇಕಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ್ ತಿಳಿಸಿದರು.

ಗ್ರೇಡ್-2 ತಹಶೀಲ್ದಾರ್‌ ನೇಮಕ ಮಾಡಿ:‘ಜಿಲ್ಲೆಯ ತಾಲ್ಲೂಕುಗಳಲ್ಲಿ ಗ್ರೇಡ್-2 ತಹಶೀಲ್ದಾರ್‌ರನ್ನು ನೇಮಕ ಮಾಡಬೇಕು. ಇದರಿಂದ ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ತಹಶೀಲ್ದಾರ್‌ ಕಚೇರಿಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲವಾಗಲಿದೆ’ ಎಂದು ತಹಶೀಲ್ದಾರರು ಮನವಿ ಮಾಡಿದರು.
‘ಭಾಲ್ಕಿ ತಾಲ್ಲೂಕಿನ ಆರು ಹಳ್ಳಿಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಸರ್ಕಾರ ಘೋಷಿಸಿದ ಬರಪೀಡಿತ ತಾಲ್ಲೂಕುಗಳಲ್ಲಿ ಭಾಲ್ಕಿ ಸೇರಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರಿಹಾರ ವಿತರಣೆ:‘2019-20ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನವೆಂಬರ್ 2019ರ ವರೆಗೆ ₹40 ಲಕ್ಷ ಪರಿಹಾರ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಸಭೆಗೆ ಮಾಹಿತಿ ನೀಡಿದರು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(ಮನರೇಗಾ) 2019-20ನೇ ಸಾಲಿನಲ್ಲಿ ಜಿಲ್ಲೆಗೆ ₹ 154 ಕೋಟಿ ವಾರ್ಷಿಕ ಗುರಿ ಇದೆ. ಈವರೆಗೆ ₹ 95 ಕೋಟಿ ಖರ್ಚಾಗಿದೆ. ಶೇ 62.17 ರಷ್ಟು ಸಾಧನೆ ಮಾಡಲಾಗಿದೆ. 35 ಲಕ್ಷ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿಯಿದ್ದು, ಈ ಪೈಕಿ ಶೇ 22.97 ರಷ್ಟು ಸಾಧನೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ತಿಳಿಸಿದರು.

‘ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 603 ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಈ ಪೈಕಿ ಬಿಟ್ಟು ಹೋದ 5,200 ಮನೆಗಳಲ್ಲಿ ಶೌಚಾಲಯ ನಿರ್ಮಾಣದ ಗುರಿಯ ಪೈಕಿ ಇದುವರೆಗೆ 1,218 ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ’ ಎಂದು ಹೇಳಿದರು.
‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸರಿಯಾದ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಪೋಲಿಯೊ, ದಡಾರ, ಕುಷ್ಠರೋಗ, ಕ್ಷಯರೋಗ, ಮಲೇರಿಯಾ ರೋಗಗಳ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು’ ಎಂದು ರಮಣರೆಡ್ಡಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್ ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿಗಳಾದ ಅಕ್ಷಯ ಶ್ರೀಧರ, ಭವರ್ ಸಿಂಗ್ ಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT