ಶುಕ್ರವಾರ, ಮೇ 29, 2020
27 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅಸಮಾಧಾನ

ಬೀದರ್‌:ವಿದ್ಯಾರ್ಥಿಗಳಿಗೆ ತಿಳಿ, ಶಿಕ್ಷಕರಿಗೆ ಗಟ್ಟಿ ಸಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್‌: ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿರಬಹುದು. ಬಡವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿ ಹಾಗೂ ಶಿಕ್ಷಕರಿಗೆ ಗಟ್ಟಿ ಸಾರು ಕೊಡುತ್ತಿರುವ ದೂರುಗಳು ಬರುತ್ತಿವೆ. ಮಕ್ಕಳ ಬಿಸಿಯೂಟದ ವಿಷಯದಲ್ಲಿ ತಾರತಮ್ಯ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೆಲ ಶಾಲೆಗಳಲ್ಲಿ ಬಿಸಿಯೂಟದಲ್ಲಿ ತರಕಾರಿ ಬಳಸುತ್ತಿಲ್ಲ. ಇನ್ನು ಕೆಲ ಶಾಲೆಗಳಲ್ಲಿ  ಕೊಳೆತ ಟೊಮೆಟೊ ಬಳಸಲಾಗುತ್ತಿದೆ. ಬಡವರ ಮಕ್ಕಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಕೆಲ ಮುಖ್ಯ ಶಿಕ್ಷಕರು, ಶಿಕ್ಷಕರು ಅನಧಿಕೃತವಾಗಿ ಶಾಲೆಗೆ ಗೈರಾಗುತ್ತಿದ್ದಾರೆ. ಅಧಿಕಾರಿಗಳಿಗೆ ತಿಳಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

‘ಶಾಲೆಗಳಲ್ಲಿ ಪೀಠೋಪಕರಣಗಳು ಇದ್ದರೂ ಒಂದು ಕೊಠಡಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಅವುಗಳನ್ನು ಬಳಸಿಕೊಳ್ಳದಿದ್ದರೆ ಹೇಗೆ?’ ಎಂದರು.

‘ಔರಾದ್‌ ತಾಲ್ಲೂಕಿನ ಕೌಠಾ(ಬಿ) ಹಾಗೂ ಬೀದರ್‌ ತಾಲ್ಲೂಕಿನ ಬುಧೇರಾದ ಮುಖ್ಯ ಶಿಕ್ಷಕರ ವಿರುದ್ಧ ಗ್ರಾಮಸ್ಥರು, ಪಾಲಕರು ಹಾಗೂ ಚುನಾಯಿತ ಪ್ರತಿನಿಧಿಗಳ ದೂರುಗಳು ಬಂದಿವೆ. ಅವರಿಗೆ ನೋಟಿಸ್‌ ಸಹ ನೀಡಲಾಗಿದೆ. ಮತ್ತೊಮ್ಮೆ ಈ ಗ್ರಾಮಗಳಿಗೆ ಭೇಟಿ ಕೊಟ್ಟು ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ಹೇಳಿದರು.

‘ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 142 ಶಾಲೆಗಳು ಕಡಿಮೆ ಫಲಿತಾಂಶ ಪಡೆದುಕೊಂಡಿವೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಶೇಕಡ 39 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಫಲಿತಾಂಶ ಸುಧಾರಣೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎರಡು ಬಾರಿ ಸಭೆಯನ್ನೂ ನಡೆಸಲಾಗಿದೆ’ ಎಂದು ಶಿಕ್ಷಣಾಧಿಕಾರಿ ಇನಾಯತ್‌ ಅಲಿ ತಿಳಿಸಿದರು.

‘ಶಿಥಿಲಾವಸ್ಥೆಯಲ್ಲಿರುವ 265 ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಲು ಸೂಚಿಸಲಾಗಿತ್ತು. ಪಿಡಬ್ಲ್ಯೂಡಿ, ಭೂಸೇನಾ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗಕ್ಕೆ ಹೊಣೆ ವಹಿಸಿಕೊಡಲಾಗಿದೆ. ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಬೇಕಾಗಿದೆ’ ಎಂದು ಹೇಳಿದರು.

‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೆಳಗಿನ ಅವಧಿಯಲ್ಲಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಮಧ್ಯಾಹ್ನದ ವೇಳೆಯಲ್ಲಿ
ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ದೂರು ನೀಡಿದರೆ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸೂಚಿಸಿದರು.

ಅತಿಥಿ ಶಿಕ್ಷಕರ ವೇತನ ಕೊಡಿ
ಬೀದರ್‌:
‘₹ 80 ಸಾವಿರದಿಂದ ₹1 ಲಕ್ಷ ಸಂಬಳ ತೆಗೆದುಕೊಳ್ಳುವ ಅಧಿಕಾರಿಗಳಿಗೆ ಒಂದು ತಿಂಗಳು ಸಂಬಳ ಬರದಿದ್ದರೆ ಚಡಪಡಿಸುತ್ತಾರೆ. ಆದರೆ ಅತಿಥಿ ಶಿಕ್ಷಕರಿಗೆ ಇರುವ ಮಾಸಿಕ ₹ 6 ಸಾವಿರ ವೇತನ ಒಂದು ವರ್ಷದಿಂದ ಬಂದಿಲ್ಲ. ಅವರಿಗೂ ಕುಟುಂಬ ಇದೆ. ಹಬ್ಬ ಹರಿದಿನಗಳೂ ಇವೆ. ಸಂತಸದಿಂದ ಪಾಠ ಮಾಡಲು ಅವರಿಗೂ ಸಕಾಲದಲ್ಲಿ ವೇತನ ಬಿಡುಗಡೆ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಹೇಳಿದರು.

‘ಅತಿಥಿ ಶಿಕ್ಷಕರು, ಉಪನ್ಯಾಸಕರು ಅಥವಾ ತಾತ್ಕಾಲಿಕವಾಗಿ ನೇಮಕವಾಗಿರುವ ಸಿಬ್ಬಂದಿ ಕೆಲಸ ಮಾಡಿದರೂ ವೇತನ ಕೊಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಸರ್ಕಾರಕ್ಕೆ ಪತ್ರ ಬರೆದು ಇಂತಹ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ
ಬೀದರ್‌:
‘ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು’ ಎಂದು ಸಿಇಒ ಮಹಾಂತೇಶ ಬೀಳಗಿ ಸೂಚಿಸಿದರು.

‘ಹಾಳಾದ ಜಲ ಶುದ್ಧೀಕರಣ ಘಟಕಗಳನ್ನು ಪುನರಾರಂಭಿಸಬೇಕು. ರಾಜಕೀಯ ಕಾರಣಕ್ಕೆ ಕೊಳವೆಬಾವಿಗಳನ್ನು ತೋಡಲು ವಿಳಂಬ ಮಾಡಬಾರದು. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಬೇಕು’ ಎಂದು ಸೂಚನೆ ನೀಡಿದರು.

‘ಕೊಡಂಬಲ ಕ್ಷೇತ್ರದಲ್ಲಿ ಅರ್ಧ ಇಂಚಿನ ಪೈಪ್‌ ಅಳವಡಿಸಿ ಶುದ್ಧ ನೀರಿನ ಘಟಕ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಎರಡು ತಿಂಗಳು ಕಳೆದರೂ ಅಧಿಕಾರಿಗಳು ಕೆಲಸ ಮಾಡಿಲ್ಲ. ತಾಲ್ಲೂಕು ಪಂಚಾಯಿತಿ ಇಒ ಮಾತು ಕೇಳುತ್ತಿಲ್ಲ. ಕೊಡಂಬಲ, ಮದರಗಿ ಹಾಗೂ ಮದರಗಾಂವದಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಭಾರತಬಾಯಿ ತಾಕೀತು ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು