ಬುಧವಾರ, ಸೆಪ್ಟೆಂಬರ್ 18, 2019
25 °C

11ರಂದು ಜಿಲ್ಲಾ ಯುವ ಸಮ್ಮೇಳನ

Published:
Updated:
Prajavani

ಬೀದರ್: ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 126ನೇ ವಾರ್ಷಿಕೋತ್ಸವದ ನಿಮಿತ್ತ ಇಲ್ಲಿಯ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಸೆ.10 ರಿಂದ 12 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ತಿಳಿಸಿದ್ದಾರೆ.

ಸೆಪ್ಟೆಂಬರ್‌ 10ರಂದು ಬೆಳಿಗ್ಗೆ 10ರಿಂದ ಜಿಲ್ಲಾ ಮಟ್ಟದ ಭಾಷಣ ಹಾಗೂ ಕ್ವಿಜ್‌ ಸ್ಪರ್ಧೆ ನಡೆಯಲಿವೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಒಂದು ಕಾಲೇಜಿನಿಂದ ನಾಲ್ಕು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಕನ್ನಡ ಮತ್ತು ಇಂಗ್ಲಿಷ್ ಬಳಸಬಹುದು.

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ ವಿಷಯದ ಮೇಲೆ ಭಾಷಣ ಸ್ಪರ್ಧೆಯಿದೆ. 5 ನಿಮಿಷ ಅವಧಿಯಲ್ಲಿ 300 ಶಬ್ದಗಳಿಗೆ ಮೀರದಂತೆ ಭಾಷಣ ಮಂಡಿಸಬೇಕು. ಕ್ವಿಜ್‌ನಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡೂ ವಿಭಾಗದ ವಿಜೇತರಿಗೆ ಸೆ. 11ರಂದು ಆಶ್ರಮದಲ್ಲಿ ನಡೆಯುವ ಜಿಲ್ಲಾ ಯುವ ಸಮ್ಮೇಳನದಲ್ಲಿ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಫಲಕ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.

ಅಂದು ಸಂಜೆ 6ಕ್ಕೆ ಪ್ರವಚನ ಹಾಗೂ ಸಂಗೀತ ಲಹರಿ ನಡೆಯಲಿದೆ. ಸಾರ್ಥಕ ಬದುಕಿಗೆ ಅಧ್ಯಾತ್ಮ ಕುರಿತು ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ ಪ್ರವಚನ ನೀಡುವರು. ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದ ಮಹಾರಾಜ ಗಾನಸುಧೆ ಹರಿಸುವರು ಎಂದು ತಿಳಿಸಿದ್ದಾರೆ.

ಸೆ. 11 ರಂದು ಬೆಳಿಗ್ಗೆ 11ಕ್ಕೆ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಮ್ಮೇಳನ ನಡೆಯಲಿದೆ. ಬೆಂಗಳೂರಿನ ಕಾರ್ಪೋರೇಟ್ ಟ್ರೇನರ್ ರಮೇಶ ಉಮರಾಣಿ ಉಪನ್ಯಾಸ ನೀಡುವರು. ಅಂದು ಸಂಜೆ 6ಕ್ಕೆ ವಿವೇಕಾನಂದರ ಕುರಿತ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದ್ದಾರೆ.

ಸೆ. 12ರಂದು ಆಶ್ರಮದ ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್‌ ಎಕ್ಸಲೆನ್ಸ್‌ ಕೇಂದ್ರದಿಂದ ಕೆಎಎಸ್, ಎಸ್‌ಡಿಎ, ಎಫ್‌ಡಿಎ, ಪಿಡಿಒ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಯ 3ನೇ ಬ್ಯಾಚ್ ಪ್ರಾರಂಭೋತ್ಸವದ ನಿಮಿತ್ತ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಪರಿಣಿತ ಬೋಧಕರು ವಿವಿಧ ವಿಷಯಗಳ ಕುರಿತು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಾರ್ಗದರ್ಶನ ಮಾಡುವರು. ಸಂಜೆ 6ಕ್ಕೆ ಈಶ ದರ್ಶನ ಪ್ರವಚನ ಹಾಗೂ ಭಜನೆ ನಡೆಯಲಿದೆ. ಭಾಷಣ ಹಾಗೂ ಕ್ವಿಜ್‌ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ಸೆ. 8 ಕೊನೆಯ ದಿನವಾಗಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 9448036608, 9448036609 ಅಥವಾ ದೂರವಾಣಿ ಸಂಖ್ಯೆ 08482-224666ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Post Comments (+)