ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಹೇಳಿಕೆ
Last Updated 26 ಜನವರಿ 2022, 13:15 IST
ಅಕ್ಷರ ಗಾತ್ರ

ಬೀದರ್: ಕೋವಿಡ್‌ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಸಾರ್ವಜನಿಕರು ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಿ ಕೋವಿಡ್‌ ಹರಡುವಿಕೆ ತಡೆಯಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮನವಿ ಮಾಡಿದರು.


ಇಲ್ಲಿಯ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


ಕೋವಿಡ್ ನಿರ್ವಹಣೆಯ ಮುಚೂಣಿ ಕಾರ್ಯಕರ್ತರ ಪರಿಶ್ರಮ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ 13.12 ಲಕ್ಷ ಜನರಿಗೆ ಕೋವಿಡ್‌ ಪ್ರತಿಬಂಧಕ ಲಸಿಕೆಯ ಮೊದಲನೇ ಡೋಸ್‍ ಕೊಡಲಾಗಿದೆ. 15 ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು, ವಿವಿಧ ಇಲಾಖೆಗಳ ಅಧಿಕಾರಿಗಳ ತಂಡಗಳನ್ನು ರಚಿಸಿ, ಪೂರ್ಣ ಪ್ರಮಾಣದಲ್ಲಿ ಲಸಿಕಾಕರಣದ ಗುರಿ ಸಾಧಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.


ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳ 181 ಜನರಿಗೆ ತಲಾ ₹1.50 ಲಕ್ಷ ಹಾಗೂ ಎಪಿಎಲ್. ಕುಟುಂಬಗಳ ತಲಾ 182 ಮಂದಿಗೆ ತಲಾ ₹ 50 ಸಾವಿರ ಪರಿಹಾರ ಧನ ವಿತರಿಸಲಾಗಿದೆ. ಆಯುಷ್‌ ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 4 ಲಕ್ಷ 20 ಸಾವಿರ ಜನರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ 10 ಅಂಬುಲನ್ಸ್ ಖರೀದಿಸಲಾಗಿದೆ. 6 ಅಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ 1.5 ಲಕ್ಷ ರೈತರ ಖಾತೆಗಳಿಗೆ ಒಟ್ಟು ₹ 93 ಕೋಟಿ ಪರಿಹಾರ ಜಮಾ ಮಾಡಲಾಗಿದೆ.

ಕರ್ನಾಟಕ ರೈತ ಸುರಕ್ಷಾ - ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈ ವರ್ಷ 2.50 ಲಕ್ಷ ರೈತರು ಬೆಳೆ ನೋದಣಿ ಮಾಡಿದ್ದಾರೆ. ಕಳೆದ 6 ವರ್ಷಗಳಂತೆ ಈ ಸಲವೂ ಬೀದರ್ ಜಿಲ್ಲೆ ಬೆಳೆ ವಿಮೆ ನೋಂದಣಿ ಮಾಡಿಸುವಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.

ಇದಕ್ಕೂ ಮೊದಲು ವಿವಿಧ ಪಡೆಗಳು ಪಥ ಸಂಚಲನ ನಡೆಸಿದವು. ಜಿಲ್ಲಾಧಿಕಾರಿ ಪರೇಡ್‌ ವೀಕ್ಷಣೆ ಮಾಡಿದರು.

ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್ ಇದ್ದರು.

ಚೆನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಬೀದರ್: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.

ಸಂಗಮೇಶ ನೇಳಗೆ (ಮುದ್ರಣ ಮಾಧ್ಯಮ), ಹಣಮಂತ ಬಬಲಾ ( ದೃಶ್ಯ ಮಾಧ್ಯಮ) , ದಿವ್ಯಾ ಚನ್ನವೀರ ಸ್ವಾಮಿ (ಚಿತ್ರಕಲೆ), ಸೋಹೆಲ್ ಅಹ್ಮದ್ (ಕ್ರೀಡೆ), ನಿಜಲಿಂಗ ರಗಟೆ (ಸಾಹಿತ್ಯ), ಶಿವಾಜಿರಾವ್ ಸಗರ (ಸಂಗೀತ), ಮಾರುತಿ ಚಾಂಬೋಳೆ (ಛಾಯಾಚಿತ್ರ), ಸಂಪತಿ (ಶಿಕ್ಷಣ), ಪುಂಡಲೀಕರಾವ್ ಅಣ್ಣಾರಾವ್, ಬಿ.ಜೆ.ವಿಷ್ಣುಕಾಂತ (ರಂಗ ಕಲೆ), ಜಗದೇವಿ ಪತ್ರಿ

(ಅಂಗನವಾಡಿ ಕಾರ್ಯಕರ್ತೆ) , ಪ್ರಾಪ್ತಿ ಅರಳಿ (ಶಿಕ್ಷಣ ವಿಶೇಷ ಸಾಧನೆ), ಗಾಯತ್ರಿದೇವಿ ಹೊಸಮನಿ (ಸಮಾಜ ಸೇವೆ), ಶ್ರೀದೇವಿ ನಿರ್ಣಾ (ಆಶಾ ಕಾರ್ಯಕರ್ತೆ) ಅವರಿಗೆ ಶಾಲು ಹೊದಿಸಿ, ಬಿದರಿ ಸ್ಮರಣಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT