ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿಯಲ್ಲಿ ಸಾಗಿರುವ ಕ್ರೀಡಾಂಗಣ ಕಾಮಗಾರಿ

ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಮೈದಾನಕ್ಕೆ ಕ್ರೀಡಾಕೂಟ ಸ್ಥಳಾಂತರ
Last Updated 13 ಜನವರಿ 2019, 19:33 IST
ಅಕ್ಷರ ಗಾತ್ರ

ಬೀದರ್‌: ನಗರದ ನೆಹರೂ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ. ವಿಳಂಬವಾಗಿ ಆರಂಭವಾಗಿರುವ ಕಾಮಗಾರಿಯಿಂದಾಗಿ ಒಂದು ವರ್ಷದಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕ್ರೀಡಾಪಟುಗಳು ಇನ್ನೂ ಕೆಲ ತಿಂಗಳು ಕಾಯಬೇಕಾಗಲಿದೆ.

ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರ ಪ್ರಯತ್ನದ ಫಲವಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಒದಗಿಸಿದೆ. ಶಿಥಿಲಗೊಂಡಿದ್ದ ಕ್ರೀಡಾಂಗಣದ ಗ್ಯಾಲರಿಯನ್ನು ಒಂದೂವರೆ ವರ್ಷದ ಹಿಂದೆಯೇ ನೆಲಸಮಗೊಳಿಸಲಾಗಿದೆ. ಆದರೆ, ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ.

ಕ್ರೀಡಾಂಗಣ ಸುತ್ತಲೂ ಆವರಣ ಗೋಡೆ ನಿರ್ಮಿಸಿ ಗ್ರಿಲ್‌ ಅಳವಡಿಸಲಾಗಿದೆ. ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಮುಖ್ಯ ಕಟ್ಟಡದ ಬಳಿ ಏಳು ಹಾಗೂ ಐದು ಮೆಟ್ಟಿಲಿನ ಒಟ್ಟು ನಾಲ್ಕು ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಮುಖ್ಯ ಕಟ್ಟಡದ ನವೀಕರಣ ಕಾರ್ಯವೂ ಆರಂಭವಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕಾಗಲಿದೆ ಎಂದು ಕ್ರೀಡಾ ಇಲಾಖೆಯ ಸಿಬ್ಬಂದಿ ಹೇಳುತ್ತಾರೆ.

‘ಕ್ರೀಡಾಂಗಣದ ಕಾಮಗಾರಿ ನಿಧಾನವಾಗಿ ಸಾಗಿರುವ ಕಾರಣ ಯಾವೊಂದು ಆಟೋಟಗಳು ನಗರದಲ್ಲಿ ನಡೆಯುತ್ತಿಲ್ಲ. ಕೆಎಸ್‌ಸಿಎ ನಡೆಸುವ ಅನೇಕ ಕ್ರಿಕೆಟ್‌ ಲೀಗ್‌ ಮ್ಯಾಚ್‌ಗಳು ಕೈ ತಪ್ಪಿವೆ. ಕ್ರೀಡಾ ಚಟುವಟಿಕೆಗಳು ಕುಂಠಿತಗೊಂಡಿವೆ’ ಎನ್ನುತ್ತಾರೆ ಬೀದರ್‌ ಕ್ರಿಕೆಟ್‌ ಅಸೋಶಿಯೇಶನ್‌ ಕಾರ್ಯದರ್ಶಿ ಅನಿಲ್‌ ದೇಶಮುಖ್‌.

‘ನಗರ ಪ್ರದೇಶದಲ್ಲಿ ಸರ್ಕಾರದ ಮೈದಾನ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಬೀದರ್‌ ತಾಲ್ಲೂಕಿನ ಕಮಠಾಣದಲ್ಲಿರುವ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ವರ್ಷಗಟ್ಟಲೇ ಯಾವುದೇ ಕ್ರೀಡೆಗಳು ನಡೆಯದಿರುವುದು ಬೇಸರ ಉಂಟು ಮಾಡಿದೆ’ ಎಂದು ಹೇಳುತ್ತಾರೆ.

‘ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ಗೆ ಕೊಡಲಾಗಿದೆ. ಒಪ್ಪಂದದ ಪ್ರಕಾರ ಮಾರ್ಚ್‌ ಅಂತ್ಯದ ವೇಳೆಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರರು ಲಿಖಿತ ಪತ್ರ ಕೊಟ್ಟಿದ್ದಾರೆ. ಈಗಾಗಲೇ ಶೇಕಡ 70 ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದಾರೆ’ ಎನ್ನುತ್ತಾರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ.

‘ಕ್ರೀಡಾಂಗಣದ ಬಳಿ ಒಂದು ಬೋರ್‌ವೆಲ್‌ ಇದೆ. ನೀರಿನ ಕೊರತೆಯಾಗುತ್ತಿರುವ ಇನ್ನೊಂದು ಬೋರ್‌ವೆಲ್ ಕೊರೆಯಲು ಜಿಲ್ಲಾ ಆಡಳಿತ ಅನುಮತಿ ನೀಡಿದೆ. ಪ್ರೇಕ್ಷಕರ ಗ್ಯಾಲರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಮಳೆ ನೀರು ಹರಿದು ಹೋಗಲು ಗಟಾರ ನಿರ್ಮಾಣ, ಟ್ರ್ಯಾಕ್‌ ಹಾಗೂ ಮೈದಾನ ಸಮತಟ್ಟುಗೊಳಿಸುವ ಕಾರ್ಯ ಬಾಕಿ ಇದೆ’ ಎನ್ನುತ್ತಾರೆ.

‘ಜಿಲ್ಲಾ ಕ್ರೀಡಾಂಗಣ ಹೊರತುಪಡಿಸಿ ನಗರ ವ್ಯಾಪ್ತಿಯಲ್ಲಿ 10 ಎಕರೆ ಪ್ರದೇಶದಲ್ಲಿ ಬೃಹತ್‌ ಕ್ರೀಡಾ ಸಮುಚ್ಛಯ ನಿರ್ಮಿಸುವ ಯೋಜನೆ ಇದೆ. ಸಮುಚ್ಛಯದಲ್ಲಿ ಈಜುಕೊಳ, ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್‌ ಇರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT