ಬೀದರ್: ‘ನನಗೆ ನಾಗಮಾರಪಳ್ಳಿ ಕುಟುಂಬ ಬಹಳ ಮುಖ್ಯ ಹೊರತು ಬಿಜೆಪಿ ಉಚ್ಚಾಟಿಸಿದರೂ ಮುಖ್ಯವಲ್ಲ. ಬಿಜೆಪಿ ಏನೇ ಕ್ರಮ ಕೈಗೊಂಡರೂ ಅದನ್ನು ಸ್ವಾಗತಿಸುತ್ತೇನೆ’ ಎಂದು ಬಿಜೆಪಿ ಮುಖಂಡ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ತಿಳಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ದೂರಿನ ಸಂಬಂಧ ಡಿ.ಕೆ.ಸಿದ್ರಾಮ ಅವರಿಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಕಾರಣ ಕೇಳಿ ನೀಡಿರುವ ನೋಟಿಸ್‌ಗೆ ಮೇಲಿನಂತೆ ಪತ್ರ ಬರೆದು ಪ್ರತಿಕ್ರಿಯಿಸಿದ್ದಾರೆ. ಆ ಪತ್ರವನ್ನು ಸೋಮವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
2005, 2010ರಲ್ಲಿ ಸತತ ಎರಡು ಸಲ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿದ್ದು ಗುರುಪಾದಪ್ಪ ನಾಗಮಾರಪಳ್ಳಿಯವರ ಆಶೀರ್ವಾದದಿಂದ. 2013, 2018ರಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕ್ರಮವಾಗಿ 48,340 ಹಾಗೂ 63,230 ಮತಗಳನ್ನು ಪಡೆದು ಈಶ್ವರ ಖಂಡ್ರೆ ಎದುರು ಸೋಲು ಕಂಡಿದ್ದೇನೆ. ಸೋಲಿನಿಂದ ಎದೆಗುಂದದೆ ಪಕ್ಷದಲ್ಲಿ ಸಕ್ರಿಯನಾಗಿರುವೆ. 2023ರಲ್ಲಿ ನನ್ನ ಬದಲು ಪ್ರಕಾಶ ಖಂಡ್ರೆಯವರಿಗೆ ಟಿಕೆಟ್ ನೀಡಲಾಯಿತು. ನನಗೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಸಾಕಷ್ಟು ಒತ್ತಡವಿದ್ದರೂ ಪಕ್ಷದ ಹಿರಿಯರ ಮಾತಿಗೆ ಬೆಲೆಕೊಟ್ಟು ಖಂಡ್ರೆ ಪರ ಪ್ರಚಾರ ಕೈಗೊಂಡಿರುವೆ. ಚುನಾವಣಾ ಪ್ರಚಾರಕ್ಕೆ ಹಣವೂ ಖರ್ಚು ಮಾಡಿದ್ದೆ ಎಂದು ನೆನಪಿಸಿದ್ದಾರೆ.
ಬೀದರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿಯವರು ಟಿಕೆಟ್ ಕೈತಪ್ಪಿದ ನಂತರ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದರು. ಬಿಜೆಪಿ ನನ್ನಿಂದ ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದು ಭಾಲ್ಕಿಯಲ್ಲಿ ನಡೆದ ಸಾವಿರಾರು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದೆ. ಆದರೆ, ಬೀದರ್ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ ದೂರು ಆಧರಿಸಿ ನನಗೆ ನೋಟಿಸ್ ಕೊಟ್ಟಿರುವುದು ನೋವು ತಂದಿದೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಟಿಕೆಟ್ ನೀಡಿದ್ದರೆ ಅವರು ಗೆಲ್ಲುತ್ತಿದ್ದರು. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಎಸ್ಸಿ ಪ್ರಮಾಣ ಪತ್ರ ಪಡೆದು, ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಠಾಕೂರ್ ಠೇವಣಿ ಕಳೆದುಕೊಂಡಿದ್ದಾರೆ. ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಅವರಿಂದ ಹಣ ಪಡೆದಿದ್ದಾರೆ. ಜೊತೆಗೆ ಪಕ್ಷ ನೀಡಿದ ಹಣವೂ ಖರ್ಚು ಮಾಡಿಲ್ಲ ಎಂಬ ಆರೋಪಗಳಿವೆ ಎಂದು ಹೇಳಿದ್ದಾರೆ.
ಸದ್ಯ ನಾನು ಪಕ್ಷದ ಯಾವುದೇ ಹುದ್ದೆ, ನಾಮನಿರ್ದೇಶನದ ಆಕಾಂಕ್ಷಿಯಲ್ಲ. ಸಕ್ಕರೆ ಕಾರ್ಖಾನೆಯ ಅಧ್ಯಕ್ಷನಾಗಿ ಜನಸೇವೆ ಮಾಡುತ್ತಿದ್ದೇನೆ. 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಗೆದ್ದು ಬರಬೇಕೆಂಬ ಇಚ್ಛೆ ಹೊಂದಿದ್ದೇನೆ. ಅರ್ಥವಿಲ್ಲದ ದೂರು ಆಧರಿಸಿ ನನಗೆ ಕೊಟ್ಟಿರುವ ನೋಟಿಸ್ ಹಿಂಪಡೆಯಬೇಕು. ಬಿಜೆಪಿಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.