ಚುನಾವಣೆ ಕರ್ತವ್ಯ ಎಚ್ಚರಿಕೆಯಿಂದ ನಿರ್ವಹಿಸಿ: ಚುನಾವಣಾಧಿಕಾರಿ ಶಂಕರ ವಣಕ್ಯಾಳ

ಭಾನುವಾರ, ಏಪ್ರಿಲ್ 21, 2019
26 °C
ಸೂಚನೆ

ಚುನಾವಣೆ ಕರ್ತವ್ಯ ಎಚ್ಚರಿಕೆಯಿಂದ ನಿರ್ವಹಿಸಿ: ಚುನಾವಣಾಧಿಕಾರಿ ಶಂಕರ ವಣಕ್ಯಾಳ

Published:
Updated:
Prajavani

ಬೀದರ್‌: ‘ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅಧಿಕಾರಿಗಳು ಪ್ರಮಾಣಿಕವಾಗಿ ಹಾಗೂ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಸಹಾಯಕ ಚುನಾವಣಾಧಿಕಾರಿ ಶಂಕರ ವಣಕ್ಯಾಳ ಸೂಚಿಸಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ಅಂತಿಮ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ತಮಗೆ ನೀಡಿರುವ ಎಲ್ಲ ರೀತಿಯ ಅರ್ಜಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಬೇಕು’ ಎಂದು ಹೇಳಿದರು.

‘ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕೃತ ಅಧಿಕಾರಿಗಳು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದಾಗ ಆ ಮಾಹಿತಿಯನ್ನು ತಪ್ಪದೇ ನಮೂದಿಸಿಕೊಳ್ಳಬೇಕು. ಚುನಾವಣಾ ಅಭ್ಯರ್ಥಿಗಳು ಅಥವಾ ಪಕ್ಷದವರಿಂದ ಮತಗಟ್ಟೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಎಲ್ಲ ಮತಗಟ್ಟೆ ಕೇಂದ್ರಗಳಿಗೆ ಅಗತ್ಯ ಭದ್ರತೆ ಒದಗಿಸಲಾಗಿದೆ. ಗೊಂದಲಗಳಿಗೆ ಆಸ್ಪದವಾಗದಂತೆ ತಮ್ಮ ಹೊಣೆಗಾರಿಕೆಯನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು. ಕರ್ತವ್ಯದ ವೇಳೆ ಯಾವುದೇ ರೀತಿಯ ತೊಡಕುಗಳು ಉಂಟಾದಲ್ಲಿ ತಕ್ಷಣ ಮೇಲಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಅವರು ಮತಗಟ್ಟೆ ಕೇಂದ್ರಗಳ ತಯಾರಿ, ಎಲೆಕ್ಟ್ರಾನಿಕ್ ಮತಯಂತ್ರಗಳ ಜೋಡಿಸುವಿಕೆ, ನಿರ್ವಹಣೆ, ಮತಗಟ್ಟೆ ಅಧಿಕಾರಿಗಳ ಹೊಣೆಗಾರಿಕೆಗಳ ಬಗ್ಗೆ ವಿವರಣೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !