ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸುಧಾರಣಾ ಆಯೋಗದ ಶಿಫಾರಸು ಜಾರಿ ಬೇಡ: ಹಣಮಂತ

ಎಡಿಎಸ್‌ಒ ಜಿಲ್ಲಾ ಸಂಚಾಲಕ ಹಣಮಂತ ಎಸ್.ಎಚ್. ಹೇಳಿಕೆ
Last Updated 4 ಫೆಬ್ರುವರಿ 2023, 9:58 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಕ್ಷಣ ವಿರೋಧಿ ಶಿಫಾರಸುಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಜಿಲ್ಲಾ ಸಂಚಾಲಕ ಹಣಮಂತ ಎಸ್.ಎಚ್. ಆಗ್ರಹಿಸಿದ್ದಾರೆ.

ಆಡಳಿತ ಸುಧಾರಣಾ ಆಯೋಗ ರಾಜ್ಯ ಸರ್ಕಾರದ ಶಿಕ್ಷಣ, ಉದ್ಯೋಗ ಹಾಗೂ ಇನ್ನಿತರ ಪ್ರಮುಖ ಕ್ಷೇತ್ರಗಳ ನಿರ್ವಹಣೆಯ ಕುರಿತು ಹಲವು ಶಿಫಾರಸುಗಳನ್ನು ಮಾಡಿದೆ. ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಪಿಯು ಕಾಲೇಜುಗಳ ಮುಚ್ಚುವಿಕೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ, ಎಸ್ ಎಸ್ ಎಲ್ ಸಿ ಪರೀಕ್ಷೆ ತೇರ್ಗಡೆಯ ಕನಿಷ್ಠ ಅಂಕವನ್ನು ಇಳಿಸುವುದು ಶಿಕ್ಷಣ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ.

ಶಾಲೆಗಳ ವಿಲೀನ ಜರುಗಿದಲ್ಲಿ, ಕನಿಷ್ಠ 3,500ಕ್ಕೂ ಹೆಚ್ಚಿನ ಶಾಲೆಗಳು ಮುಚ್ಚಲಿವೆ. ಸರ್ಕಾರದ ಅಂಕಿ ಅಂಶಗಳೇ ಹೇಳುವಂತೆ ಈ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಾಗಿದೆ. ಬರುವ ಶೈಕ್ಷಣಿಕ ವರ್ಷವೂ ಇದೇ ಮುಂದುವರಿಯಲಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ, ಸರ್ಕಾರಿ ಶಾಲೆಗಳ ಸುಧಾರಣೆ ಸರ್ಕಾರದ ಆದ್ಯತೆಯಾಗಬೇಕು. ಬದಲಾಗಿ, ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚಬಾರದು. ಆಯೋಗವು, ಶಿಕ್ಷಣದಿಂದ ಹೊರಗುಳಿಯುವ ವಿದ್ಯಾರ್ಥಿಗಳ ಪ್ರಮಾಣ ಕಡಿಮೆ ಮಾಡಬೇಕು ಎಂದು ಹೇಳಿದೆ, ಅದಕ್ಕಿರುವ ಏಕೈಕ ಮಾರ್ಗ ವೆಂದರೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್. ಆರ್. ಐ ಕೋಟಾದ ಪ್ರಮಾಣ ಹೆಚ್ಚಿಸಿದರೆ, ಬಡ ವಿದ್ಯಾರ್ಥಿಗಳಿಗೆ ಮತ್ತಷ್ಟು ಸೀಟುಗಳ ಪ್ರಮಾಣ ಕುಸಿಯುತ್ತದೆ. ಹಿಂದೆ, ವೈದ್ಯಕೀಯ ವಿದ್ಯಾರ್ಥಿಗಳ ಹೋರಾಟದ ಪರಿಣಾಮ, ಸರ್ಕಾರ ಈ ಪ್ರಸ್ತಾವವನ್ನು ಕೈ ಬಿಟ್ಟಿತ್ತು. ಜತೆಗೆ, ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನಿಷ್ಠ ತೇರ್ಗಡೆಯಾಗಿ ಅಂಕ ಇಳಿಸಿದರೆ, ಈಗಾಗಲೇ ಕೋವಿಡ್ ನಂತರ ಕುಸಿದಿರುವ ಶಿಕ್ಷಣದ ಮಟ್ಟ ಮತ್ತಷ್ಟು ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ, ಆಡಳಿತ ಸುಧಾರಣಾ ಆಯೋಗ ನೀಡಿರುವ ಶಿಕ್ಷಣ ವಿರೋಧಿ ಶಿಫಾರಸುಗಳನ್ನು ತಿರಸ್ಕರಿಸಬೇಕು. ಮುಂಬರುವ ಬಜೆಟ್‌ನಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಸರಿಯಾದ ಅನುದಾನ ಒದಗಿಸಬೇಕು ಎಂದು ಮನವಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT