ಗುರುವಾರ , ಮೇ 26, 2022
31 °C

ನಿವೇಶನ ಕೊಳ್ಳುತ್ತೀರಾ..ಸ್ವಲ್ಪ ಎಚ್ಚರ ವಹಿಸಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರು ಅಧಿಕಾರಿಗಳನ್ನೇ ತಮ್ಮ ಮುಷ್ಠಿಯಲ್ಲಿ ಹಿಡಿದಿಟ್ಟು ಕೊಳ್ಳುವಷ್ಟು ಪ್ರಭಾವಿಗಳು. ಈ ಕಾರಣದಿಂದಲೇ ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನುಗಳ ಅತಿಕ್ರಮಣ ಹೆಚ್ಚಿದೆ.

ಕೆಲ ಖಾಸಗಿ ಭೂ ಮಾಲೀಕರು ಸಹ ಒಂದೇ ಜಮೀನನ್ನು ಇಬ್ಬರು, ಮೂವರಿಗೆ ಮಾರಾಟ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಪೊಲೀಸ್‌ ಠಾಣೆ ಹಾಗೂ ನ್ಯಾಯಾಲಯದಲ್ಲಿ ಹೆಚ್ಚಾಗುತ್ತಿವೆ.

ಬೀದರ್‌ ನಗರದಲ್ಲಿರುವ 130 ಖಾಲಿ ನಿವೇಶನಗಳು ಅತಿಕ್ರಮಣಗೊಂಡಿವೆ. ಉದ್ಯಾನಗಳಲ್ಲಿ ಅನಧಿಕೃತವಾಗಿ ಗಣಪತಿ, ಮಾರುತಿ ಹಾಗೂ ಇನ್ನಿತರ ದೇವಸ್ಥಾನಗಳು ತಲೆ ಎತ್ತಿವೆ. ಹಿಂದೆ ಹಾಡಹಗಲೇ ಅನಧಿಕೃತವಾಗಿ ಕಟ್ಟಡ ಕಟ್ಟಿದರೂ ನಗರಸಭೆ ಅಧಿಕಾರಿಗಳು ಒಬ್ಬರಿಗೂ ನೋಟಿಸ್‌ ನೀಡಿದ ದಾಖಲೆಗಳು ಇಲ್ಲ. ಅಧಿಕಾರಿಗಳು ತಮ್ಮ ಸಮುದಾಯಕ್ಕೆ ಸೇರಿದವರಿಗೆ ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಒತ್ತುವರಿ ಮಾಡುವರ ಸಂಖ್ಯೆಯೂ ಅಧಿಕವಾಗಿದೆ ಎಂದ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಚ್‌.ಆರ್‌.ಮಹಾದೇವ ಅವರು ಅನಧಿಕೃತ ಬಡಾವಣೆಗಳನ್ನು ಗುರುತಿಸಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿದ್ದರು. ಅಲ್ಲದೇ ಅವುಗಳನ್ನು ರದ್ದು ಪಡಿಸಿದ್ದರು. ಬೀದರ್ ತಾಲ್ಲೂಕಿನ ಕಮಠಾಣ ಸಮೀಪ ಸರ್ಕಾರಿ ಜಮೀನನಲ್ಲೇ ಖಾಸಗಿಯವರು ಪ್ಲಾಟ್ ಮಾಡಿ ಕೆಲವರಿಗೆ ಮಾರಿದ್ದು ಬೆಳಕಿಗೆ ಬಂದ ನಂತರ ಅದನ್ನು ರದ್ದು ಪಡಿಸಿ ಸರ್ಕಾರಿ ಜಮೀನಿನ ಅಧಿಕೃತ ನೋಟಿಸ್‌ ಹೊರಡಿಸಿದ್ದರು. ನಂತರ ಜಿಲ್ಲಾಡಳಿತ ಹೊರಡಿಸಿದ ಆದೇಶದಲ್ಲೂ ಏರುಪೇರಾಗಿದೆ.

ಬದುಕು ಸಾಗಿಸಲು ವಾಮಮಾರ್ಗ

ಕೆಲವರು ಬದುಕು ಸಾಗಿಸಲು ವಾಮಮಾರ್ಗದಲ್ಲಿ ಸಾಗುತ್ತಿದ್ದಾರೆ. ಕೆಲ ಜಮೀನು ಮಾಲೀಕರು 10, 15 ವರ್ಷಗಳ ಹಿಂದೆ ಮಾರಾಟ ಮಾಡಿದ್ದ ಜಮೀನುಗಳನ್ನೇ ಮತ್ತೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಮನೆ ಕಟ್ಟುವ ಕನಸು ಕಂಡು ನಿವೇಶನ ಖರೀದಿಸಿದ ಅನೇಕ ವ್ಯಕ್ತಿಗಳು ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಹಾಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಮಾಡುವವರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಜಮೀನು ಮಾಲೀಕರು ಕೆಲವರಿಗೆ ಜಮೀನು ಮಾರಾಟ ಮಾಡಿ ₹ 100ರ ಬಾಂಡ್‌ ಮೇಲೆ ಬರೆದುಕೊಟ್ಟಿದ್ದಾರೆ. ಆದರೆ, ನೋಂದಣಿ ಕಚೇರಿಯಲ್ಲಿ ಹೆಸರು ವರ್ಗಾವಣೆ ಮಾಡಿಕೊಟ್ಟಿಲ್ಲ. ಕೆಲವರು ನೋಂದಣಿ ಮಾಡಿಕೊಂಡರೂ ಮುಟೇಷನ್‌ ಮಾಡಿಕೊಂಡಿಲ್ಲ. ಇಂತಹ ದುರ್ಬಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮೋಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಕೊಟ್ಟರೂ ನ್ಯಾಯಾಲಯದ ಮೊರೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ನ್ಯಾಯಾಲಯಕ್ಕೆ ಹೋದರೆ ಕನಿಷ್ಠ 10ರಿಂದ 15 ವರ್ಷಗಳಾದರೂ ಬೇಕಾಗಲಿದೆ. ಜಮೀನು ಮಾಲೀಕನ ಮೇಲೆ ನಂಬಿಕೆ ಇಟ್ಟು ನಿವೇಶನ ಖರೀದಿಸಿದವರು ಪರಿತಪಿಸುತ್ತಿದ್ದಾರೆ.

‘ನಿವೇಶನ ಸಂಖ್ಯೆ ಒಂದೇ ಇದ್ದರೂ ಸರ್ವೆ ನಂಬರ್‌ಗಳಲ್ಲೇ ಎ,ಬಿ,ಸಿ ಎಂದು ಉಲ್ಲೇಖಿಸಿ ದಾರಿ ತಪ್ಪಿಸುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. ಜಮೀನು ಖರೀದಿಸುವ ಮೊದಲು ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ನಂತರವೇ ವ್ಯವಹಾರ ಮಾಡಿಕೊಳ್ಳಬೇಕು. ಆದಷ್ಟು ಬೇಗ ಉಪ ನೋಂದಣಿ ಕಚೇರಿಯಲ್ಲಿ ಜಮೀನು ನೋಂದಣಿ ಹಾಗೂ ಆಸ್ತಿ ಮಾಲೀಕತ್ವ ವರ್ಗಾವಣೆ ಮಾಡಿಕೊಳ್ಳಬೇಕು’ ಎಂದು ವಕೀಲ ಕೇಶವ ಶ್ರೀಮಾಳೆ ಸಲಹೆ ನೀಡುತ್ತಾರೆ.

ಕಲ್ಲು ಹೂತು ನಿವೇಶನ ಮಾರಾಟ

ಬಸವಕಲ್ಯಾಣ: ಎಲ್ಲೆಂದರಲ್ಲಿ ಜಮೀನು ಖರೀದಿಸಿ ಅದನ್ನು ಸಮತಟ್ಟುಗೊಳಿಸಿ ಕಲ್ಲುಗಳನ್ನು ಹೂತು ಮಾರುವ ಪ್ರಕರಣಗಳು ಬಸವಕಲ್ಯಾಣದಲ್ಲಿ ಬಲು ಜೋರಾಗಿದೆ.

ಕೃಷಿಯೇತರ ಜಮೀನಾಗಿ ಪರಿವರ್ತಿಸದೆ, ನಿಯಮಾನುಸಾರ ನಿವೇಶನ ಅಭಿವೃದ್ಧಿ ಮಾಡದೆ, ಕೇವಲ ಕಲ್ಲುಗಳನ್ನು ಹೂತು ಪ್ಲಾಟ್ ಮಾರಲಾಗುತ್ತಿದೆ. ಕೆಲವರು ಸರ್ಕಾರಿ ಜಮೀನು ಕೂಡ ಅತಿಕ್ರಮಣ ಮಾಡಿ ನಿವೇಶನವ್ನಾಗಿ ಪರಿವರ್ತಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ಇನ್ನೂ ಕೆಲವರು ಒಂದೇ ನಿವೇಶನ ಇಬ್ಬರು, ಮೂವರಿಗೆ ಮಾರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈ ಸಂಬಂಧ ದೊಡ್ಡ ಗಲಾಟೆ ಸೃಷ್ಟಿಯಾಗಿದ್ದರೂ ನಂತರ ರಾಜಿ ಸಂಧಾನ ನಡೆಸಿದ್ದರಿಂದ ಇಂಥವುಗಳ ಬಗ್ಗೆ ದಾಖಲೆ ಸಿಗುವುದಿಲ್ಲ. ಆದರೂ, ಇದರಿಂದ ಕೆಲ ಬಡ ಕುಟುಂಬದವರು ತೊಂದರೆಗೆ ಸಿಲುಕುತ್ತಿದ್ದಾರೆ.

ಸರ್ಕಾರಿ ಹಾಗೂ ಉದ್ಯಾನಕ್ಕಾಗಿ ಮೀಸಲಿರಿಸಿದ ಉದ್ಯಾನಗಳು ಕಬಳಿಕೆ ಆಗುತ್ತಿವೆ. ಈ ಕಾರಣ ನಗರಸಭೆಯವರು ಗಂಗಾ ಕಾಲೊನಿ, ಸೀತಾ ಕಾಲೊನಿ, ಶಿವಾಜಿ ಪಾರ್ಕ್ ಮುಂತಾದೆಡೆ ಉದ್ಯಾನಗಳ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಿ ಸಂರಕ್ಷಣೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು