ಭಾನುವಾರ, ಆಗಸ್ಟ್ 25, 2019
24 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಸೂಚನೆ

ಕೆಲಸ ಮಾಡಲಾಗದಿದ್ದರೆ ಮನೆಗೆ ಹೋಗಿ

Published:
Updated:

ಬೀದರ್‌: ‘ಜಿಲ್ಲೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಮುಖ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲಸ ಮಾಡಲಿಚ್ಛಿಸದವರು ಸೇವೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿ ಕುಳಿತುಕೊಳ್ಳಬಹುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಸೂಚಿಸಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

‘ಹಿಂದಿನ ತಿಂಗಳು ಕರೆದಿದ್ದ ಸಭೆಗೆ ಅನೇಕ ಅಧಿಕಾರಿಗಳು ಗೈರಾಗಿದ್ದರು. ಮಾಹಿತಿ ನೀಡದ 17 ಇಲಾಖೆಗಳ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್‌ ನೀಡಿದರೂ ಉತ್ತರ ನೀಡಿಲ್ಲ. ಆಗಸ್ಟ್ 5 ರಂದು ಸಭೆಯ ಮಾಹಿತಿ ನೀಡಿದರೂ ಭಾನುವಾರ ಮಧ್ಯಾಹ್ನ 2 ಗಂಟೆಗೆ ನನಗೆ ವರದಿ ಕೊಟ್ಟಿದ್ದಾರೆ. ಅದರಲ್ಲಿ ಅನೇಕ ಇಲಾಖೆಗಳ ಪ್ರಗತಿಯ ವಿವರಗಳೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೊನೆಯ ಕ್ಷಣದಲ್ಲಿ ಅಪೂರ್ಣ ಮಾಹಿತಿಯನ್ನು ತಂದುಕೊಟ್ಟರೆ ಹೇಗೆ ಪರಿಶೀಲನೆ ಮಾಡಬೇಕು. ಕನಿಷ್ಠ ಒಂದು ವಾರ ಮೊದಲಾದರೂ ಮಾಹಿತಿ ಕೊಡಬೇಕು ಎನ್ನುವ ಕನಿಷ್ಠ ತಿಳಿವಳಿಕೆಯೂ ಬೇಡವೇ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಚಿಂತಾಕಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ಉದ್ಘಾಟನೆಗೂ ಮೊದಲೇ ಸೋರಲು ಆರಂಭಿಸಿದೆ. ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ದೊರಕುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೋಗಸ್‌ ಇಲಾಖೆಯಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮೂರು ಸಭೆಗಳಿಗೆ ಹಾಜರಾಗಿಲ್ಲ. ಅವರನ್ನು ಇಲ್ಲಿಂದ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಗೀತಾ ಸೂಚಿಸಿದರು.

‘ಈವರೆಗೂ ಸ್ಥಾಯಿ ಸಮಿತಿಗಳ ರಚನೆಯಾಗಿಲ್ಲ. ಉಪಾಧ್ಯಕ್ಷ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಆದರೆ
ನನಗೆ ಈವರೆಗೆ ಯಾವುದೇ ಅಧಿಕಾರ ಕೊಟ್ಟಿಲ್ಲ’ ಎಂದು ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ ಹೇಳಿದರು.
‘ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಸಿಇಒ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಭೆಗೆ ಸಮಗ್ರವಾದ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

 

Post Comments (+)