ನಗರದಲ್ಲಿ ಕತ್ತೆ ಹಾಲು ಮಾರಾಟ

7
ಪ್ರತಿ ಲೀಟರ್‌ ಹಾಲಿಗೆ ₹ 5 ಸಾವಿರ!

ನಗರದಲ್ಲಿ ಕತ್ತೆ ಹಾಲು ಮಾರಾಟ

Published:
Updated:
Deccan Herald

ಬೀದರ್‌: ನೆರೆಯ ಮಹಾರಾಷ್ಟ್ರದ ಕತ್ತೆ ಹಾಲು ಮಾರಾಟಗಾರರ ತಂಡ ನಗರಕ್ಕೆ ಬಂದಿದೆ. ನಗರದ ಹೊರ ವಲಯದಲ್ಲಿ ಶಹಾಪುರ ಗೇಟ್‌ ಸಮೀಪ ಕತ್ತೆ ಮಾಲೀಕರು ಬೀಡು ಬಿಟ್ಟಿದ್ದು, ಬೆಳಗಾಗುತ್ತಲೇ ಕತ್ತೆಗಳೊಂದಿಗೆ ಓಣಿ ಓಣಿಗಳಲ್ಲಿ ಸಂಚರಿಸುತ್ತಿದ್ದಾರೆ.

ಕತ್ತೆ ವನಸ್ಪತಿಗಳನ್ನು ತಿನ್ನುವುದರಿಂದ ಅದರ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಶೀತ, ನೆಗಡಿ, ಕೆಮ್ಮು , ಎಲುಬು ಹಾಗೂ ಕೀಲುಗಳ ನೋವು ನಿವಾರಣೆಗೆ ಸಿದ್ಧ ಔಷಧವಾಗಿದೆ ಎಂದು ಹೇಳುವ ಮೂಲಕ ಚಿಕ್ಕ ಬಾಟಲಿಯೊಂದರ ಮುಚ್ಚಳಿಕೆಯಷ್ಟು ಹಾಲನ್ನು ₹ 50 ಕ್ಕೆ ಮಾರಾಟ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ನಾಂದೇಡ ಜಿಲ್ಲೆ ಭಂಡಾರ ತಾಲ್ಲೂಕಿನ ಖೇಡ ಗ್ರಾಮದ 10 ಯುವಕರು 10 ಕತ್ತೆಗಳೊಂದಿಗೆ ನಗರಕ್ಕೆ ಬಂದಿದ್ದಾರೆ. ನಗರದ ಹೊರವಲಯದಲ್ಲಿ ಕತ್ತೆಗಳನ್ನು ಮೇಯಿಸಿ ನಂತರ ತಮ್ಮೊಂದಿಗೆ ಓಣಿಗಳಿಗೆ ಒಯ್ದು ಕತ್ತೆ ಹಾಲು ಬೇಕೆ ಕತ್ತೆ ಹಾಲು? ಎಂದು ಕೂಗುತ್ತಿದ್ದಾರೆ.

ಬಡಾವಣೆಗಳಲ್ಲಿನ ಮನೆಗಳ ಮಂದೆ ಕತ್ತೆಗಳನ್ನು ನಿಲ್ಲಿಸಿ ಸ್ಥಳದಲ್ಲೇ ಹಾಲು ಕರೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ನಿತ್ಯ ಸಂಜೆಯ ವರೆಗೆ ನಗರದೆಲ್ಲೆಡೆ ಸುತ್ತಾಡಿ ₹ 500 ರಿಂದ ₹ 1,200ರ ವರೆಗೆ ಸಂಪಾದಿಸುತ್ತಿದ್ದಾರೆ.

‘ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಾತ್ರ ಕತ್ತೆ ಹಾಲು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಮೇವಿನ ಕೊರತೆ ಇರುತ್ತದೆ. ಬೇಸಿಗೆಯಲ್ಲಿ ಕತ್ತೆ ಹಾಲು ಕುಡಿಯುವುದು ಸೂಕ್ತವೂ ಅಲ್ಲ. ಜನರಿಗೆ ತಿಳಿವಳಿಕೆ ನೀಡಿಯೇ ಹಾಲು ಮಾರಾಟ ಮಾಡುತ್ತಿದ್ದೇವೆ’ ಎಂದು ಕತ್ತೆ ಮಾಲೀಕ ರವಿ ಜಾಧವ ಹೇಳುತ್ತಾರೆ.

‘ಕತ್ತೆ ಹಾಲು ಒಂದು ಲೀಟರ್‌ಗೆ ₹ 5 ಸಾವಿರಕ್ಕೆ ಮಾರಾಟವಾಗುತ್ತದೆ. ಕಡಿಮೆ ಹಾಲು ಕೊಡುವ ಹಾಗೂ ಔಷಧೀಯ ಗುಣ ಹೆಚ್ಚು ಇರುವ ಕಾರಣ ಬೇಡಿಕೆ ಇದೆ’ ಎನ್ನುತ್ತಾರೆ ಅವರು.

‘ಕತ್ತೆ ದಿನವೊಂದಕ್ಕೆ ಮೂರು, ಮೂರೂವರೆ ಲೀಟರ್‌ ಹಾಲು ಕೊಡುತ್ತದೆ. ಕತ್ತೆ ಮರಿ ಕುಡಿದು ಬಿಟ್ಟ ಸ್ವಲ್ಪ ಹಾಲು ಮಾರಾಟ ಮಾಡುತ್ತೇವೆ. ಕತ್ತೆಯೊಂದಿಗೆ ತಿರುಗಾಡಿದರೆ ಮಾತ್ರ ನಮಗೆ ಒಂದಿಷ್ಟು ಆದಾಯ ಬರುತ್ತದೆ. ಇಲ್ಲದಿದ್ದರೆ ನಮ್ಮ ಬದುಕು ಸಹ ಕಷ್ಟ’ ಎನ್ನುತ್ತಾರೆ ಕತ್ತೆ ಮಾಲೀಕ ಬಾಲಾಜಿ ಧೋತ್ರೆ.

‘ತೆಲಂಗಾಣದ ಜಹೀರಾಬಾದ್‌ನಲ್ಲೂ ಕತ್ತೆ ಹಾಲು ಮಾರಾಟ ಮಾಡಿದ್ದೇವೆ. ಕತ್ತೆಗಳನ್ನು ಹಿಡಿದುಕೊಂಡು ದೂರದ ಊರಿಗೆ ಹೋಗುವುದು ಕಷ್ಟವಾಗುತ್ತದೆ. ಹೀಗಾಗಿ ಒಂದು ಗೂಡ್ಸ್‌ ಆಟೊದಲ್ಲಿ ನಾಲ್ಕು ಕತ್ತೆಗಳನ್ನು ಸಾಗಣೆ ಮಾಡುತ್ತೇವೆ’ ಎಂದು ಹೇಳುತ್ತಾರೆ.

ಕೊಬ್ಬಿನಾಂಶ ಕಡಿಮೆ
‘ಕೆಲ ಪ್ರಾಣಿಗಳ ಹಾಲು ಮಾತ್ರ ಸೇವನೆಗೆ ಯೋಗ್ಯ ಎನ್ನುವ ರೂಢಿಗತ ನಂಬಿಕೆ ಇದೆ. ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ಖನಿಜಾಂಶ ಹಾಗೂ ಪೌಷ್ಟಿಕಾಂಶ ಅಧಿಕ ಇರುತ್ತದೆ. ತಾಯಿ ಹಾಲಿಗಿಂತಲೂ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ’ ಎಂದು ಪಶು ವೈದ್ಯಕೀಯ ತಜ್ಞ ಪ್ರಕಾಶ ರಾಠೋಡ ಹೇಳುತ್ತಾರೆ.

‘ಹಿಂದಿನ ಕಾಲದಲ್ಲಿ ತಾಯಿಯನ್ನು ಕಳೆದುಕೊಂಡ ಮಗುವಿಗೆ ಕತ್ತೆ ಹಾಲು ಕುಡಿಸಲಾಗುತ್ತಿತ್ತು. ಮಗು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿದ್ದ ಕಾರಣ ಪೂರ್ವಜರು ಕತ್ತೆ ಹಾಲು ಬಳಸುತ್ತಿದ್ದರು. ದೇಶದ ಕೆಲ ಕಡೆ ಇಂದಿಗೂ ಕತ್ತೆ ಹಾಲು ಬಳಸುವ ಪದ್ಧತಿ ಇದೆ’ ಎಂದು ವಿವರಿಸುತ್ತಾರೆ.

‘ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಉತ್ತಮ. ಹಾಲಿನಲ್ಲಿ ಬ್ಯಾಕ್ಟೇರಿಯಾಗಳು ಇರುವುದರಿಂದ ಬಿಸಿ ಮಾಡಿ ಆರಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು’ ಎಂದು ಹೇಳುತ್ತಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !