ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಾಬರಿ ಮಸೀದಿಗೆ ದೇಣಿಗೆ ಕೊಡಬೇಡಿ

ಶೋಷಿತರ ಐಕ್ಯತಾ ಸಮಾವೇಶದಲ್ಲಿ ಅಸಾದುದ್ದೀನ್ ಓವೈಸಿ ಮನವಿ
Last Updated 27 ಜನವರಿ 2021, 16:44 IST
ಅಕ್ಷರ ಗಾತ್ರ

ಬೀದರ್: ‘ಅಯೋಧ್ಯೆಯಲ್ಲಿ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಾಬರಿ ಮಸೀದಿಗೆ ಯಾರೊಬ್ಬರೂ ದೇಣಿಗೆ ನೀಡಬಾರದು. ಬದಲಾಗಿ, ಬಡವರು, ಅನಾಥರ ಮದುವೆಗೆ ದೇಣಿಗೆ ಕೊಡಬೇಕು’ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಮನವಿ ಮಾಡಿದರು.

72ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ವತಿಯಿಂದ ನಗರದ ಹೊರವಲಯದಲ್ಲಿರುವ ರಾಯಲ್ ಫಂಕ್ಷನ್‌ ಹಾಲ್‌ನಲ್ಲಿ ಆಯೋಜಿಸಿದ್ದ ಶೋಷಿತರ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಅಯೋಧ್ಯೆಯ ಬಾಬರಿ ಮಸೀದಿ ತೀರ್ಪಿನ ನಂತರ ಐದು ಎಕರೆ ಪಡೆದವರು ಹೇಡಿಗಳು, ಕ್ರೂರಿಗಳು. ಹೊಸ ಮಸೀದಿಗೆ ಜಮೀನು ಪಡೆದು ಈಗ ಹಣ ಕೇಳುತ್ತಿದ್ದಾರೆ. ಅಂತಹ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಪಾಪ. ಅದು ಧರ್ಮ ವಿರೋಧಿಯೂ ಆಗಲಿದೆ’ ಎಂದು ಟೀಕಿಸಿದರು.

‘ಯಾರಿಗೂ ಸಂಶಯ ಬಾರದಿರಲಿ ಎಂದು ವ್ಯಕ್ತಿಯೊಬ್ಬ ಮಸೀದಿಯಲ್ಲೇ ಇಸ್ಲಾಂ ಸಂಸ್ಥಾಪಕನ ಕೊಲೆಗೆ ಸಂಚು ರೂಪಿಸಿದ್ದು ಮುಸಲ್ಮಾನರಿಗೆ ತಿಳಿದಿದೆ. ಅಂತಹ ಧರ್ಮ ವಿರೋಧಿ ಮಸೀದಿ ನಮಗೆ ಬೇಕಿಲ್ಲ. ಪ್ರವಾದಿ ಬದುಕಿದ್ದರೆ ಅವರು ಸಹ ಅಸಹ್ಯ ಪಟ್ಟುಕೊಳ್ಳುತ್ತಿದ್ದರು’ ಎಂದರು.

‘ಬೀದರ್‌ನಲ್ಲಿ ನಡೆಯುವ ನಗರಸಭೆ ಚುನಾವಣೆಯಲ್ಲಿ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದವರ ವಿರುದ್ಧ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ. ಎರಡೂ ಸಮುದಾಯದವರಿಗೂ ಸಹಕಾರ ನೀಡಲಿದೆ. ಮತ ಹಾಕಿಸುವ ಕೆಲಸ ಮಾಡಲಿದೆ. ಇಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಕಲಬುರ್ಗಿಯಲ್ಲಿ 30ರಂದು ರಾಜಕೀಯ ಭಾಷಣ ಮಾಡಲಿದ್ದೇನೆ’ ಎಂದು ತಿಳಿಸಿದರು.

‘ಬಾಬಾಸಾಹೇಬ ಅಂಬೇಡ್ಕರ್‌ ಬರೆದ ಸಂವಿಧಾನದ ಮೀಸಲಾತಿ ಅಡಿಯಲ್ಲಿ ಚುನಾಯಿತರಾದ 100 ಸಂಸದರು ಸಂಸತ್ತಿನಲ್ಲಿ ಬಾಯಿ ಮುಚ್ಚಿ ಕುಳಿತು ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ದ್ರೋಹ ಬಗೆಯುತ್ತಿದ್ದಾರೆ. ಇಂಥವರು ದೇಶಕ್ಕೆ ಹೆಚ್ಚು ಅಪಾಯಕಾರಿ. ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಜೀವಂತಿಕೆಯ ಲಕ್ಷಣ. ಮೌನವಾಗಿರುವವರು ಬದುಕಿದ್ದರೂ ಸತ್ತಂತೆ’ ಎಂದು ಕಿಡಿಕಾರಿದರು.

‘ಅಂಬೇಡ್ಕರ್‌ ಅವರನ್ನು ಸರಿಯಾಗಿ ಅರಿತವರು ಸಂವಿಧಾನಕ್ಕೆ ಗೌರವ ಕೊಡುತ್ತಾರೆ. ತಿಳಿಯದವರು ಗೋಡ್ಸೆ ತತ್ವಗಳಿಗೆ ಮಣೆ ಹಾಕುತ್ತಾರೆ. ಗೋಡ್ಸೆ ಹಾಗೂ ಸಾವರಕರ್‌ ಅವರ ತತ್ವಗಳಿಗೆ ಗೌರವ ಕೊಡುವವರ ಮಧ್ಯೆ ಭೂಮಿ– ಆಕಾಶದಷ್ಟು ಅಂತರ ಇದೆ. ಗೋಡ್ಸೆ ಆದರ್ಶವಾದಿಗಳೇ ಮಹಾತ್ಮ ಗಾಂಧಿ ಹತ್ಯೆ ಮಾಡಿಸಿದರು. ಪುಕ್ಕಲು ಗೋಡ್ಸೆ ವೃದ್ಧ ಜೀವಿಯನ್ನು ಗುಂಡಿಕ್ಕಿ ಕೊಂದ. ಜಾತಿ ಪದ್ಧತಿಗೆ ಒತ್ತು ಕೊಡುವವರೇ ನೈಜ ದೇಶ ದ್ರೋಹಿಗಳು. ಅಂತಹವರಿಂದ ಎಚ್ಚರಿಕೆಯಿಂದ ಇರಬೇಕು’ ಎಂದು ಮನವಿ ಮಾಡಿದರು.

‘ನಮ್ಮ ಸಂವಿಧಾನ ಯಾವುದೇ ಒಂದು ಧರ್ಮಕ್ಕೆ ಆದ್ಯತೆ ಕೊಡುವುದಿಲ್ಲ. ಎಲ್ಲ ಧರ್ಮಗಳಿಗೂ ಮಹತ್ವ ಕೊಟ್ಟಿದೆ. ಧರ್ಮನಿರಪೇಕ್ಷ ದಾರಿಯಲ್ಲಿ ಸಾಗುತ್ತಿರುವವರಿಗೆ ದೇಶ ದ್ರೋಹಿಯ ಪಟ್ಟ ಕಟ್ಟಲಾಗುತ್ತಿದೆ. ರಾಜಕೀಯದಲ್ಲಿ ಧರ್ಮ ಬೆರೆಸುವುದು ಅಂದರೆ ಹಾಳಾಗುವುದರ ಮಾರ್ಗ ಎಂದರ್ಥ. ನಮ್ಮದು ಕೇವಲ ಹಿಂದೂಗಳ ರಾಷ್ಟ್ರ ಅಲ್ಲ. ಹಿಂದೂ, ಮುಸ್ಲಿಂ, ಜೈನ್, ಬೌದ್ಧ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲ ಧರ್ಮದವರ ದೇಶವಾಗಿದೆ’ ಎಂದು ಹೇಳಿದರು.

‘ನಮಗೆ ಹೆಗಲಿಗೆ ಹೆಗಲು ಕೊಟ್ಟು ಸಾಗುವ ಸಹೋದರರು ಬೇಕಾಗಿದ್ದಾರೆ. ನಮಗೆ ರಾಜಕೀಯದಲ್ಲಿ ಅಂಧ ಭಕ್ತರು ಬೇಕಿಲ್ಲ. ನರೇಂದ್ರ ಮೋದಿ ಅವರ ಹಿಂದೆ ಇರುವವರೆಲ್ಲರೂ ಅಂಧ ಭಕ್ತರು’ ಎಂದು ಜರಿದರು.

‘ಮಹಾತ್ಮ ಗಾಂಧಿ, ಸುಭಾಷಚಂದ್ರ ಬೋಸ್, ಮೌಲಾನಾ ಆಜಾದ್‌ ಅವರ ಪ್ರೀತಿ, ವಿಶ್ವಾಸದ ದೇಶದಲ್ಲಿ ಇಂದು ಲವ್‌ ಜಿಹಾದ್‌ ಹೆಸರಲ್ಲಿ ಕರ್ನಾಟಕ ಸರ್ಕಾರ ಕಾನೂನು ಮಾಡಲು ಹೊರಟಿದೆ’ ಎಂದು ಟೀಕಿಸಿದರು.

ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆಯ ಅಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT