ಡಿಸಿಸಿ ಬ್ಯಾಂಕ್‌ಗಳು ರೈತರ ದಾರಿ ತಪ್ಪಿಸಬಾರದು: ಸಚಿವ ಬಂಡೆಪ್ಪ ಕಾಶೆಂಪೂರ

7

ಡಿಸಿಸಿ ಬ್ಯಾಂಕ್‌ಗಳು ರೈತರ ದಾರಿ ತಪ್ಪಿಸಬಾರದು: ಸಚಿವ ಬಂಡೆಪ್ಪ ಕಾಶೆಂಪೂರ

Published:
Updated:

ಬೀದರ್‌: ‘ರಾಜ್ಯ ಸರ್ಕಾರ ಆದೇಶ ಹೊರಡಿಸದಿದ್ದರೂ ಡಿಸಿಸಿ ಬ್ಯಾಂಕ್‌ ನೋಟಿಸ್‌ಗಳನ್ನು ಜಾರಿ ಮಾಡಿ ರೈತರ ದಾರಿ ತಪ್ಪಿಸುವುದು ಸರಿಯಲ್ಲ. ಆದೇಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಗೊಂದಲ ಸೃಷ್ಟಿಯಾದರೆ ತಕ್ಷಣ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ಅಕ್ಟೋಬರ್‌ 1ರೊಳಗೆ ಅರ್ಜಿ ಸಲ್ಲಿಸದಿದ್ದರೆ ಸಾಲ ಮನ್ನಾ ಸೌಲಭ್ಯ ಸಿಗುವುದಿಲ್ಲ ಎಂದು ಬೀದರ್‌ ಡಿಸಿಸಿ ಬ್ಯಾಂಕ್ ರೈತರಿಗೆ ತಪ್ಪು ಮಾಹಿತಿ ನೀಡಿದೆ. ಹೀಗಾಗಿ ಗೊಂದಲ ನಿವಾರಿಸಿ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್‌ 15ರ ವರೆಗೆ ವಿಸ್ತರಿಸಲಾಗಿದೆ’ ಎಂದು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘22 ಲಕ್ಷ ರೈತರು ಸಾಲ ಮನ್ನಾದ ಲಾಭ ಪಡೆಯಲಿದ್ದಾರೆ. ₹ 25 ಸಾವಿರ ವರೆಗೆ ಸಾಲ ಪಡೆದ 6 ಲಕ್ಷ ಹಾಗೂ ₹ 50 ಸಾವಿರ ಸಾಲ ಪಡೆದ 15 ಲಕ್ಷ ರೈತರು ಇದ್ದಾರೆ. ಯಾರು ಎಷ್ಟು ಬೇಗ ಅರ್ಜಿಗಳನ್ನು ಸಲ್ಲಿಸುವರೋ ಅವರಿಗೆ ಸಾಲ ಮನ್ನಾದ ಸೌಲಭ್ಯ ಮೊದಲು ದೊರೆಯಲಿದೆ. ಸ್ಥಳೀಯ ಬ್ಯಾಂಕ್‌ಗಳು ಗೊಂದಲ ಸೃಷ್ಟಿಸಬಾರದು’ ಎಂದು ಎಚ್ಚರಿಸಿದರು.

‘ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಬ್ಯಾಂಕ್‌ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಿ ಸರಿಯಾದ ಮಾಹಿತಿ ನೀಡಬೇಕು. ಸರಳವಾದ ಅರ್ಜಿ ನಮೂನೆಯಲ್ಲಿ ರೈತರ ಮಾಹಿತಿ ಭರ್ತಿ ಮಾಡಬೇಕು. ಅನಕ್ಷರಸ್ಥರು ಆಗಿದ್ದರೆ ಬ್ಯಾಂಕ್‌ನವರೇ ಮಾಹಿತಿಗಳನ್ನು ಭರ್ತಿ ಮಾಡಬೇಕು’ ಎಂದು ಹೇಳಿದರು.

ಖರೀದಿ ಕೇಂದ್ರ:
ರಾಜ್ಯದಲ್ಲಿ 126 ಹೆಸರು ಖರೀದಿ ಕೇಂದ್ರಗಳು ಆರಂಭವಾಗಿವೆ. ಕೇಂದ್ರ ಸರ್ಕಾರ 23 ಸಾವಿರ ಮೆಟ್ರಿಕ್‌ ಟನ್‌ ಹೆಸರು ಬೇಳೆ ಖರೀದಿಸುವ ಭರವಸೆ ನೀಡಿದೆ. ರಾಜ್ಯ ಸರ್ಕಾರ ರೈತರ ಮನೆಗೆ ಬಂದಾದರೂ ಹೆಸರು ಬೇಳೆ ಖರೀದಿಸಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ಪ್ರಸ್ತುತ ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಉದ್ದು ಹಾಗೂ ಸೋಯಾ ಖರೀದಿಗೆ ಹೆಚ್ಚುವರಿ ಖರೀದಿ ಕೇಂದ್ರಗಳನ್ನು ತೆರೆಯಲು ಅನುಮತಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಉತ್ಪಾದನೆಯಲ್ಲಿ ಶೇಕಡ 25ರಷ್ಟು ಬೇಳೆ ಕಾಳು ಖರೀದಿಸಲು ಒಪ್ಪಿಗೆ ನೀಡುವ ಅಧಿಕಾರ ಕೇಂದ್ರ ಕೃಷಿ ಸಚಿವರಿಗೆ ಇದೆ. ಮೊದಲು(ಲ) ಪ್ರಸ್ತಾವದಲ್ಲಿ ರಾಜ್ಯದಲ್ಲಿ 92 ಸಾವಿರ ಮೆಟ್ರಿಕ್‌ ಟನ್‌ ಹೆಸರು ಉತ್ಪಾದನೆ ಆಗಿರುವುದನ್ನು ಉಲ್ಲೇಖಿಸಲಾಗಿತ್ತು. ಇದೀಗ 1.10 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗಿರುವುದನ್ನು ಸಚಿವರ ಗಮನಕ್ಕೆ ತರಲಾಗಿದೆ. 27,500 ಸಾವಿರ ಮೆಟ್ರಿಕ್‌ ಟನ್‌ ವರೆಗೂ ಖರೀದಿಸಲು ಅವಕಾಶ ದೊರೆಯಲಿದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !