ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಕೋಟೆ ರಕ್ಷಣೆಗೆ ಬಂದೂಕುಧಾರಿಗಳು

ಸ್ಮಾರಕಗಳ ರಕ್ಷಣೆಗೆ ಕೋಟೆ ಸುತ್ತಲೂ ಆವರಣ ಗೋಡೆ ನಿರ್ಮಾಣ
Last Updated 8 ಜುಲೈ 2019, 19:45 IST
ಅಕ್ಷರ ಗಾತ್ರ

ಬೀದರ್: ಐತಿಹಾಸಿಕ ಸ್ಮಾರಕಗಳಿಗೆ ರಕ್ಷಣೆ ಒದಗಿಸುವ ದಿಸೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವು ಬೀದರ್ ಕೋಟೆಗೆ ಬಂದೂಕುಧಾರಿಗಳನ್ನು ನಿಯೋಜಿಸಿದೆ. ಅಷ್ಟೇ ಅಲ್ಲ, ಯಾರೊಬ್ಬರೂ ಅನುಮತಿ ಇಲ್ಲದೆ ಒಳಗೆ ಪ್ರವೇಶಿಸದಂತೆ ಪುರಾತನ ಕೋಟೆಗೆ ಹೊರವಲಯದಲ್ಲಿ ಗ್ರಿಲ್‌ ಹಾಕಿ ಬೇಲಿ ನಿರ್ಮಿಸುತ್ತಿದೆ.

ಇಲ್ಲಿಯ ಕೋಟೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿತ್ಯ ಕನಿಷ್ಠ 200 ಜನ ಬಂದರೆ, ಭಾನುವಾರ ಸೇರಿ ರಜಾ ದಿನಗಳಲ್ಲಿ 1,000 ದಿಂದ 2,000 ಪ್ರವಾಸಿಗರು ಭೇಟಿ ಕೊಡುತ್ತಾರೆ. ಸ್ಮಾರಕಗಳ ರಕ್ಷಣೆ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಬಂದೂಕುಧಾರಿಗಳನ್ನು ನೇಮಿಸಲಾಗಿದೆ.

‘ಬೀದರ್‌ ಕೋಟೆಗೆ ಈಗಾಗಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಎಸ್‌ಐ (ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ) ನಿರ್ದೇಶನದಂತೆ ಇದೀಗ ಡಬಲ್‌ ಬ್ಯಾರೆಲ್‌ ಗನ್‌ ಹೊಂದಿರುವ ನಾಲ್ವರನ್ನು ರಕ್ಷಣೆಗೆ ನೇಮಕ ಮಾಡಲಾಗಿದೆ. ಈ ಬಂದೂಕುಧಾರಿಗಳು ಹಗಲು ರಾತ್ರಿ ಕೋಟೆ ಕಾವಲು ಮಾಡುತ್ತಾರೆ’ ಎಂದು ಸ್ಮಾರಕ ಸಹಾಯಕ ಸಂರಕ್ಷಣಾಧಿಕಾರಿ ಮೌನೇಶ ಕುರವತ್ತಿ ಹೇಳುತ್ತಾರೆ.

ಕೇಂದ್ರ ಸರ್ಕಾರ ಅಧೀನದ ವಿಪ್ಕೊ ನಿಗಮದ ಮೂಲಕ ₹ 2.5 ಕೋಟಿ ವೆಚ್ಚದಲ್ಲಿ ಕೋಟೆಯ ಸುತ್ತ 2,500 ಮೀಟರ್ ಗ್ರಿಲ್‌ ಹಾಕಿ ಬೇಲಿ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಬೀದರ್‌ ತಾಲ್ಲೂಕಿನ ಮಾಮನಕೇರಿ ಮಾರ್ಗದಲ್ಲಿ ಆವರಣ ಗೋಡೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಕೊಡಲು ವಿಳಂಬ ಮಾಡಿದ್ದರಿಂದ ಕಾಮಗಾರಿ ತಡವಾಗಿ ಆರಂಭವಾಗಿದ್ದು, ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದೆ.

ಮಾಮನಕೇರಿಯಿಂದ ನಾವದಗೇರಿಯವರೆಗೆ ರಸ್ತೆ ಬದಿಗೆ ಆವರಣ ಗೋಡೆ ನಿರ್ಮಿಸಲಾಗುತ್ತಿದೆ. ಇದೇ ಅವಧಿಯಲ್ಲಿ ಗ್ರಿಲ್‌ ಅಳವಡಿಸುವ ಕಾರ್ಯವೂ ನಡೆದಿದೆ. ಆವರಣ ಗೋಡೆ ಹಾಗೂ ಬೇಲಿ ನಿರ್ಮಾಣದಿಂದ ಅತಿಕ್ರಮಣ, ಜಾನುವಾರುಗಳ ಪ್ರವೇಶ ಹಾಗೂ ಬಯಲು ಶೌಚಕ್ಕೆ ಬರುವವರನ್ನು ತಡೆಯಲು ಸಾಧ್ಯವಾಗಲಿದೆ.

‘ಕೋಟೆ ಹಿಂಭಾಗದಲ್ಲಿ ವಾಸವಿರುವ ಕೆಲವರು ಎಎಸ್‌ಐ ಜಾಗ ಅತಿಕ್ರಮಣ ಮಾಡಿದ್ದಾರೆ. ಸಮೀಕ್ಷೆ ಮಾಡುವಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ 10 ಬಾರಿ ಪತ್ರ ಬರೆಯಲಾಗಿದೆ. ಆದರೆ ಸರ್ವೆ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ’ ಎಂದು ಎಎಸ್‌ಐ ಸಿಬ್ಬಂದಿ ಹೇಳುತ್ತಾರೆ.

ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಕೋಟೆಯೊಳಗೆ ಅಂತರರಾಷ್ಟ್ರೀಯ ಗುಣಮಟ್ಟದ ಪುರಾತನ ಸ್ಮಾರಕದ ಮಾದರಿಯಲ್ಲಿ ಕಪ್ಪುಕಲ್ಲಿನಿಂದ ಶೌಚಾಲಯ ನಿರ್ಮಿಸಲಾಗುತ್ತಿದೆ. ಪಾದಚಾರಿ ರಸ್ತೆ ಹಾಗೂ ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಶುದ್ಧ ನೀರಿನ ಘಟಕ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ.

‘ಉದ್ಯಾನ ಅಭಿವೃದ್ಧಿಗೆ ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಕೋಟೆ ಒಳಗೆ ಉದ್ಯಾನ ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಬೀದರ್‌ ಕೋಟೆ ಹೊಸ ರೂಪ ಪಡೆಯಲಿದೆ’ ಎಂದು ಎಎಸ್‌ಐ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT