ಬುಧವಾರ, ಜನವರಿ 29, 2020
27 °C
ಡಾ.ಚನ್ನಬಸವ ಪಟ್ಟದ್ದೇವರ 130ನೇ ಜಯಂತಿಯಲ್ಲಿ ಡಾ.ಶಿವಮೂರ್ತಿ ಸ್ವಾಮೀಜಿ ಹೇಳಿಕೆ

ಸುಖದ ಬೆನ್ನು ಹತ್ತುವವರು ಭ್ರಮಾಧೀನರು : ಡಾ.ಶಿವಮೂರ್ತಿ ಸ್ವಾಮೀಜಿ

ಪ್ರಜಾವಾಣಿ ವಾತೆ೯ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಸುಖ ಶಾಶ್ವತವಾದುದಲ್ಲ. ಸುಖದ ಹಿಂದೆ ಬೆನ್ನು ಹತ್ತಿ ಹೋಗುವವರು ಭ್ರಮಾಧೀನರು. ಸುಖ, ದುಃಖ ಸಮನಾಗಿ ಹಂಚಿಕೊಂಡ ಅಲ್ಲಮಪ್ರಭು, ಅಕ್ಕಮಹಾದೇವಿ ಅವರು ತಮ್ಮ ಬದುಕಿನಲ್ಲಿ ದುಃಖದ ಸವಾಲುಗಳನ್ನು ಮುಂದಿಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿಯ ಬಿಕೆಐಟಿ ಕಾಲೇಜು ಆವರಣದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಲಿಂ.ಡಾ.ಚನ್ನಬಸವ ಪಟ್ಟದ್ದೇವರ 130ನೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರ ತತ್ವಗಳನ್ನು ತನ್ನ ಬದುಕಿನ ಪ್ರಯೋಗ ಶಾಲೆಯನ್ನಾಗಿಸಿಕೊಂಡು ಸಮಾಜ ಮತ್ತು ಧರ್ಮದ ಸವಾಲನ್ನು ಎದುರಿಸಿದರು. ಮನುಷ್ಯ ತನ್ನ ಬದುಕು ಸಾರ್ಥಕಗೊಳಿಸುವ ಸುಖ ಪ್ರಧಾನ, ಪ್ರಬುದ್ದ ಜೀವನ ಮತ್ತು ಪ್ರಯೋಗಶೀಲ ಜೀವಿಸುತ್ತಾರೆ. ಸುಖ ಪ್ರಧಾನ ವಸ್ತುವನ್ನಾಗಿಸಿಕೊಂಡು ಒತ್ತಡಗಳ ಮಧ್ಯೆ ಬದುಕು ಸಾಗಿಸುತ್ತಾರೆ.

ಲಿಂ.ಡಾ. ಪಟ್ಟದ್ದೇವರು ಅನಿಷ್ಟತೆ, ಮೂಢ ನಂಬಿಕೆ ಮತ್ತು ಜಾತಿ ಸಂಘರ್ಷಗಳನ್ನು ಬದಿಗೊತ್ತಿ ಸಮಾಜ ಸುಧಾರಣೆ ಮಾಡಿದರು. ಡಾ.ಭೀಮಣ್ಣಾ ಖಂಡ್ರೆ ಅವರ ಜತೆ ಸೇರಿ ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ದಲಿತ ಮತ್ತು ಅಸ್ಪಶೃರನ್ನು ಮಠಗಳಲ್ಲಿ ಪ್ರವೇಶ ಮಾಡಿಸಿ ಜಾತ್ಯತೀತ ಸಮಾಜ ನಿರ್ಮಿಸಿದರು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಲಿಂಗೈಕ್ಯ ಪಟ್ಟದ್ದೇವರು ಶಿಕ್ಷಣದಿಂದಲೇ ಸಮಗ್ರ ಅಭಿವೃದ್ದಿ ಎಂದು ಅರಿತುಕೊಂಡು 1936ರಲ್ಲಿ ಮೋರಗಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ನಂತರ ಖೇಡ ಸಂಗಮ, ಸೋಲಾಪೂರ ಮತ್ತು ಕಮಲನಗರ ಗ್ರಾಮಕ್ಕೆ ಶಾಲೆ ವರ್ಗಾಯಿಸಿದರು. ಡಾ.ಭೀಮಣ್ಣಾ ಖಂಡ್ರೆ ಅವರ ಜತೆ ಸೇರಿಕೊಂಡು 1962ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಕನ್ನಡದ ಗೊತ್ತಿಲದ ನಾಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಂಪು ಹರಡಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ ಎಂದರು.

ನಿಜಗುಣಾನಂದ ಸ್ವಾಮಿ ಮಾತನಾಡಿ, ಬಹುಸಂಸ್ಕೃತಿ ಹೊಂದಿರುವ ದೇಶದಲ್ಲಿ ವಿವಿಧ ಜಾತಿ ಮತ್ತು ಧರ್ಮಗಳು ಇವೆ. ಆದರೆ ಏಕ ಸಂಸ್ಕೃತಿ ಪದ್ದತಿಯನ್ನು ಬಲವಂತವಾಗಿ ಹೇರುತ್ತಿರುವುದು ತೀರಾ ಖಂಡನೀಯ. ದೇವರು ಮತ್ತು ಧರ್ಮವಾದವನ್ನು ಮುಂದಿಟ್ಟುಕೊಂಡು ಶ್ರಮದ ಬದುಕು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಮೂಢ ನಂಬಿಕೆ, ಅಸ್ಪಶೃತೆ ಮತ್ತು ವರ್ಗ ವ್ಯವಸ್ಥೆ ಮುಂದಿಟ್ಟುಕೊಂಡು ಶರಣರ ತತ್ವಗಳನ್ನು ಅಳಿಸಿ ಹಾಕಲು ನಡೆಸುತ್ತಿರುವ ಪ್ರಯತ್ನ ಅತ್ಯಂತ ನಾಚಿಕೆಗೇಡು. ಲಿಂಗಾಯತ ಸಮಾಜ ಅವನತಿ ಹಂತದಲ್ಲಿದ್ದು, ಅದನ್ನು ಕಟ್ಟಿ ಬೆಳೆಸಿದ ಮಹಾತ್ಮರ ತತ್ವಗಳ ಸಂರಕ್ಷಣೆಗೆ ಯುವಕರು ಮುಂದಾಗಬೇಕು ಎಂದರು.

ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಸಭೆ ಅಧ್ಯಕ್ಷತೆ ವಹಿಸಿದರು. ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯ, ಡಾ.ರಾಜಶೇಖರ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಂಟೂರ, ಬಸವರಾಜ ಜಾಬಶೆಟ್ಟೆ, ಜಗದೀಶ ಎಂ.ಕೆ, ಪಿ.ಆರ್.ದ್ವಾರಕಾನಾಥ, ಬಿಕೆಐಟಿ ಪ್ರಾಚಾರ್ಯ ಡಾ.ನಾಗಶೆಟ್ಟಿ ಬಿರಾದಾರ, ವಿದ್ಯಾವತಿ, ಸಿದ್ದರಾಮ ಬೆಲ್ದಾಳ ಶರಣ, ಬಾಬುರಾವ್ ಮೇತ್ರೆ, ಶೈಲಜಾ, ಶಿವಾನಂದ ದೇವರು, ಜಿ.ಪಂ.ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಇದ್ದರು.

ಶಿವಕುಮಾರ ಪಾಂಚಾಳ ವಚನ ಗಾಯನ ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)